ಸೋಮವಾರ, ಮಾರ್ಚ್ 10, 2014

ಗೆಲುವೆಂದರೇನು..?

ಗೆಲುವೆಂದರೇನು..?
ಸೋಲಿನ ಸೊಲ್ಲ ನುಂಗಿದವನು ಕೇಳಿದ
ಗೆದ್ದೆನೆಂಬ ಅಮಲಿನವನು ಬಾಯಿಬಿಟ್ಟ
-ಎದೆಯುಬ್ಬಿಸಿ ನಿಲ್ಲುವುದೇ ಗೆಲುವು
ಸೋತವನು ತಲೆ ತಗ್ಗಿಸಿದ್ದ
; ಕಾಲ್ಗಳ ಬದಲು ಕಂಡಿದ್ದು ಅವನ ನೆಲೆ
ಅವನ್ಯಾರ ಕಣ್ಣಿಗೂ ಕಾಣಲೇಯಿಲ್ಲ ; ಎಂದಂದುಕೊಂಡ
ತಲೆಯೆತ್ತಿದರೇ ತಾನೇ ಕಾಣುವುದು
ತಿವಿಯುವ ದೃಷ್ಟಿಗಳ ಭಯಕೆ ತಗ್ಗಿಸಿಯೇ ನಡೆದ

ಥತ್ ನೋಡಿ.,
ಗೆದ್ದವನ ಬಿಟ್ಟು ಸೋತವನ ಹಿಡಿದು ಕುಂತೆ
ಎದೆಯುಬ್ಬಿಸಿದ್ದವನಲ್ಲವೇ, ಪಾಪ ನೆಲವೇ ಕಾಣಲಿಲ್ಲ
ಅನಂತವು ನಿಲುಕಲಿಲ್ಲ
ಸುತ್ತಲ ಕಣ್ಣಗಳೇ ಸುಟ್ಟು ತಿಂದವು
ಎಲ್ಲರ ದೃಷ್ಟಿಗಳನ್ನು ಗೆದ್ದುಕೊಂಡ ಹೆಮ್ಮೆ
ಗೆದ್ದ ಹಬ್ಬ ಊರ ಹೆಬ್ಬಾಗಿಲವರೆಗೂ
ಸಂಭ್ರಮ ಮುಗಿಯಿತು ; ಎಂದುಕೊಂಡ
ನೆಟ್ಟುಕೊಂಡ ದೃಷ್ಟಿಗಳು ಬಿಟ್ಟಾವೆಯೇ
ಹೆಜ್ಜೆ ಹೆಜ್ಜೆಯ ಗುರುತು ಹಚ್ಚಿದವು
ಪಾದದಳತೆಗೆ ಮಾಪಕ ಹಿಡಿದವು
ಹಲವು ಹೆಜ್ಜೆಗಳ ಬಿಟ್ಟು ಕೆಲವು ಹಿಡಿದು ಸೊಟ್ಟ ಎಂದವು
ತಪ್ಪು ಒಪ್ಪುಗಳ ಲೆಕ್ಕವಿಟ್ಟವು
ಮುಂದುವರೆದು ಗೆರೆಕೊರೆದು ದಾರಿಯನ್ನು ಮಾಡಿಬಿಟ್ಟವು
ಗೆದ್ದವನು ನೀನು, ಓಡುತ್ತಲೇಯಿರು
ಎಲ್ಲಿಯೂ ನಿಲ್ಲದಿರು, ಹಿಂದಿರುಗಿಯೂ ನೋಡದಿರು
ಗೆದ್ದವನು ಗೆಲ್ಲುತ್ತಲೇಯಿರಬೇಕೆಂದವು
ಕಣ್ಣಿಗೆ ಪಟ್ಟಿಕಟ್ಟಿದವು, ಚಪ್ಪಾಳೆ ತಟ್ಟಿದವು

ಪಟ್ಟಿ ಹರಿಯುವವರೆಗು ಓಡೇ ಓಡಿದ
ಮತ್ತಷ್ಟು ದೃಷ್ಟಿಗಳ ಗೆದ್ದ
ಕೊನೆಗೊಂದು ದಿನ ಹರಿದೇ ಹೋಯಿತು ಕಣ್ಣಪೊರೆ
ಗೆಲುವಿನಮಲಿನಲ್ಲಿ ಕಳೆದೋದ
ಸೋಲ ನೆನೆದ ; ಸೋತವನ ನೆನೆದ

ಗೆಲುವಿನಿಂದೇಯೇ ಸೋತವನ ಕಾಲ್ಗಳು ಕಂಡವು
ಮುಂದೆ ದಕ್ಕಬಹುದಾದ ಬೇಡಿಗಾಗಿ ಅವು ತಲೀಮು ನಡೆಸಿದ್ದವು
ಗೆಲುವಿನ ಮೇಲೆ ಗಳ ಬಿಸಾಡ ಎಂದು ತೆಪ್ಪಗೆ ಕುಂತ
ನೆಟ್ಟುಕೊಂಡ ದೃಷ್ಟಿಗಳು ಬಗೆಯಲು ಶುರುವಿಟ್ಟವು
ಕೊನೆಗೊಂದು ದಿನ ಸೋತವನೇನೋ ಗೆದ್ದ
ಆದರೆ...
ಗೆದ್ದವನ ಕೊಂದು ತಿನ್ನಲು ಮುತ್ತಿಕೊಂಡಿದ್ದವು

ಗೆಲುವೆಂದರೇನು..?
ಮೂಲೆಹಿಡಿದ ಅವನು ತನ್ನನ್ನೇ ತಾನೇ ಕೇಳಿಕೊಂಡು
ಕಣ್ಣು ಪಿಳಿಗುಡಿಸುತ್ತಾ ಕುಳಿತಿದ್ದನು ; ಬಲಿಯಾಗಲು.

-ಶರತ್ ಚಕ್ರವರ್ತಿ.

ಭಾನುವಾರ, ಜೂನ್ 16, 2013

ಒಂದು ಪೋರ್ಟ್ ಮಾಟಂ'ನ ಸುತ್ತ..


ಅದ್ಯಾವ ಸಿಂಡ್ರೆಲಾ ಬಿಟ್ಟು ಹೋದ ಚಪ್ಪಲಿಯೋ
ಒಂಟಿಯಾಗಿ ನೇತಾಡುತ್ತಿದೆ ಚಮ್ಮಾರನರಮನೆಯಲ್ಲಿ
ಅದರ ಬೆನ್ನಿಗೆ ಬೆನ್ನು ಕೊಟ್ಟು ಕುಳಿತು
ಕಾಲ್ಬೆರಳರಲಿ ಎದೆಮೆಟ್ಟಿ ಜುಟ್ಟುಹಿಡಿದು
ಸ್ವಾಟೆ ಸಿಗಿಳಿ ಹೊಲಿಗೆಹಾಕುತ್ತಿದ್ದಾನವನು
ಕಣಿ ಹೊಡೆಯಲು ಬಂದು
ಬೀಡಿ ಊಪುತ್ತಿದ್ದ ಮುದುಕನ ಕನ್ನಡಕದ ಮೇಲಿನ ಧೂಳು
ರಸ್ತೆಗೆ ದೃಷ್ಟಿನೆಟ್ಟು ಸಾಂದ್ರತೆಯ ಸೋಗಿನಲ್ಲಿದೆ
ಒಳಗಿದ್ದ ಮಂದಗಣ್ಣು ಅದರರಿವಿಲ್ಲದೇ
ಮಗಳ ಭವಿಷ್ಯತ್ತನ್ನು ತಡಕಾಡುತ್ತಿವೆ
ಮುತ್ತಿಡುವ ಪೈಪೋಟಿಯಲ್ಲಿ ಕಚ್ಚಾಡುವ ನೊಣಗಳ
ಕಂಡು ನಾಚಿ ಕೆಂಪೇರುತ್ತಿದೆ ಟೀ ಲೋಟ
ತನ್ನೊಳಗಿರುವುದು ಮಧುರಸವೆಂದೆ ಅದರ ಭ್ರಮೆ
ಬೀಡಿ ಹೊಗೆಬಿಟ್ಟ ಬಾಯಿಗೆ
ಬಿಸಿಯಾರಿದ ಟೀ ಮೇಲಿನ ತಾತ್ಸಾರದಿಂದ ತುಟಿ ಒಣಗಿದೆ
ಮೈಸುಟ್ಟುಕೊಂಡು ಮಜಕೊಡುವ ಬೀಡಿ ಕಿಟ್ಟವಾಗಿ ಉದುರಿದಾಗ
ಮೈ ಹೊಲಿಸಿಕೊಂಡು ಹೊರಬಿದ್ದ ಮೆಟ್ಟಿಗೆ ಬಿಡುಗಡೆಯ ಭಾಗ್ಯ
; ಐವತ್ತು ರೂಪಾಯಿ ಜಾಮೀನಿನ ಹೊರೆ
ಮುಸಿ ಮುಸಿ ನಗುತ್ತಿದ್ದ ಗಾಂಧಿಯನ್ನೊಪ್ಪಿಸಿ
ಮೆಟ್ಟಿನ್ಹೆಣ ಬಿಡಿಸಿಕೊಂಡು ಮನೆಗೆ ಹೊರಟೆ.

ಶರತ್ ಚಕ್ರವರ್ತಿ.

ಚಡ್ಡಿಯ ಪೋಸ್ಟಾಪೀಸು ಮುಚ್ಚಿದಾಗ

ಮೆಟ್ಟಿ ಊರಿ ಮತ್ತೆ ಕಿತ್ತು ಮುಂದೆ ಇಟ್ಟು
ನಡೆದು ಬಂದ ಹೆಜ್ಜೆಗುರುತುಗಳು
ಮುಚ್ಚಿಹೋದವುಗಳೆಷ್ಟೋ
ಕೊಚ್ಚಿಹೋದವುಗಳೆಷ್ಟೋ
ಮೆಚ್ಚಿ ಹಚ್ಚಳಿಯದೇ ಉಳಿದುಬಿಟ್ಟವುಗಳೆಷ್ಟೋ
ಮತ್ತವೆ ಗುರುತುಗಳ ತಲೆತುಳಿದು ನಡೆದು
ಪಾದದಳತೆ ಅಳೆದು ಹೆಜ್ಜೆಗಳ ಲೆಕ್ಕ ಇಡಬೇಕಿದೆ

ಹೊಟ್ಟೆಯ ಹಿಡಿದಿಟ್ಟುಕೊಳ್ಳಲಾಗದ ಬನೀಯನ್ನಿನ
ಬೆನ್ನ ಹಿಂದೆ ಖನ್ನ ಹಾಕಿ ಪೇರಿಕಿತ್ತು
ಜಿಲೇಬಿರಸದ ಬೆರಳು ನೆಕ್ಕಿ
ಬುಡುಬುಡುಕೆಯೊಳಗಿನ ಬುರುಡೆ ಮಾತುಗಳ ಬೆನ್ನುಹತ್ತಿ
ಗಟ್ಟು ಹೊಡೆದು ಅಣಕವಾಡಿ
ಹರಿದ ಚಡ್ಡಿಯ ಬಾಯ ದಬ್ಬಳ ದಳೆದು
ಪೋಸ್ಟಾಪಿಸು ಬಾಗಿಲೆಳೆದುಕೊಂಡಿತು

ಸಗಣಿ ಬಳಿದ ಹಸುರಾಕಾಶದಲಿ ತಾರೆಗಳನ್ನಿಟ್ಟು
ಹಟ್ಟಿ ಎದೆಗೆ ರಂಗೋಲಿ ಹರಡಿದವಳ
ಹಿಣುಕಿದ ತುಂಬುತನದ ಮುಂದೆ
ಅಲುಗದೇ ಅಂಟು ನಿಂತ ಹೆಜ್ಜೆಗುರುತು ಮಾಸಲಾಗಿದೆ
ಕಣ್ಣ ಪೊರೆ ಬಲಿತಿರಬೇಕು

ಪಡಿಮೂಡದವಳ ಹಚ್ಚನ್ನರಸಿ
ಅಲೆದು ಸವೆದ ಪಾದತಳ
ಹೊಸೆದುಕೊಂಡು ಹರಿದುಕೊಂಡು
ನಿಶೆಯೇರಿ ತೂರಾಡಿಕೊಂಡು
ಬೇಲಿ ಹಾರಲು ಹೋಗಿ ಮಂಡಿ ತರಚಿಕೊಂಡು
ತಿರುಗಿ ಮರುಗಿಕೊಂಡ ಹೆಜ್ಜೆಗಳು

ಎರಗಿ ಬಂದಂತೆ ಮಾಡಿ
ತೋಯ್ದು ನಿಂತುಕೊಂಡ ನಿರ್ಲಿಪ್ತ
; ನಿರುತ್ತರ ಹೆಜ್ಜೆಗಳು
ತಿರುಗಿ ನಿಂತು ಹಾದಿ ಮರೆತ ಹೆಜ್ಜೆಗಳು
ಗುರುತುಗಳ ಗೋಜ ಬಿಟ್ಟು
ನೆಟ್ಟು ನಡೆಯುತ್ತಲೇ ಇರುವ ಹೆಜ್ಜೆಗಳು
ಇನ್ನೆಲ್ಲಿಯ ಗುರುತುಗಳು.


ಶರತ್ ಚಕ್ರವರ್ತಿ.

ಶನಿವಾರ, ಮೇ 4, 2013

ಹಗಲುಗನಸು

ಊರ್ದ್ವಮುಖ ಮಾಡಿ ನಿಂತ ಕನಸೊಂದು
ನಡು ರಾತ್ರಿ ಸ್ಖಲಿಸುತ್ತಿದೆ.
ರೋಮ ರೋಮಗಳ ಜಲಕಿಂಡಿಗಳು
ವಿದ್ಯುತ್ ಮೂಲಗಳು
ನರನಾಡಿಗಳಲ್ಲಿ ಪ್ರವಹಿಸಿ
ಅಂಟು ಬೆವರ ಕಂಟು ಗಮಲು
ಬುದ್ದಿ ಮಂಕು, ದೃಷ್ಟಿ ಕ್ಷೀಣ
ಬೆದೆಯ ಹಾವಿಗೆ ಕಿವಿಗಳಿಲ್ಲ
ಮೂಳೆಗಳಿಲ್ಲ, ತಡವಿದಲ್ಲೆಲ್ಲಾ ಮೆದು ಮಾಂಸ
ಚಪ್ಪರಿಸುವ ರುಚಿ ತಿಂದಷ್ಟೂ ಮುಗಿಯದು
ತೇಗುವ ಮಾತೆಲ್ಲಿ, ಬರಿ ನರಳಿಕೆಗಳು ಮಾತ್ರ

ಹಿರಿಮೆ ಗರಿಮೆಗಳಿಲ್ಲದೇ ಹೊರಳುವಾಗ
ಸರದಿಯಂತೆ ಸರಿದಾಟ ; ಮೇಲೆ-ಕೆಳಗೆ
ಅವುಚಿ ಹಿಡಿದರೂ ಕಿವುಚಿ ತಿಂದರೂ
ಕರಗದ ಮನಸು
ಆಕಾಶದೆಡೆಗೆ ದೃಷ್ಟಿನೆಟ್ಟು ಚಂದ್ರಿಕೆಯನು ಹಿಡಿದೆಳೆದು
ಕುಟ್ಟಿ ಹದ ಮಾಡಿ ಹರಡಿಕೊಳ್ಳುವ
ಶಿಖರ ಸ್ವರೂಪಿ ಕನಸು

ಹಸಿವನ್ನ ಅರಗಿಸಿ ದಾಹ ಸ್ರವಿಸುವ
ನಡುವಲ್ಲಿ ಉಗಮತಾಣ ಚಿಮ್ಮಿದೆ
ಅಲ್ಲೊಂದಿಷ್ಟು ಸ್ಖಲಿತ ಕನಸುಗಳು
ಜೀವಪಡೆವ ತವಕದಲ್ಲೇ ವಸರಿಕೊಂಡು
ಅನಾಥವಾಗಿ ಅದೃಶ್ಯವಾಗುತ್ತವೆ

ಕೊಸರಿಕೊಳ್ಳುತ್ತಿದ್ದ ಮನಸ್ಸು ಧಿಸ್ಸ್..ನೇ
ನಿಟ್ಟುಸಿರ ನಿಡಿಸುಯ್ಯುತ್ತಾ ನಿದ್ರೆಗೆ ಜಾರಿದೆ
ಕುಸಿದು ಬಿದ್ದು ತಡವರಿಸಿ ಪುನಃ ಎದ್ದು
ಸಮಯ ಕಾದಿದೆ ಅವಕಾಶವಾದಿ ಕನಸು.
ನಡುರಾತ್ರಿ ಕಳೆದಿದೆ, ಮುಂಜಾನೆ ಮೂಡಿದೆ
ಮನಸು ಮನಸಾ ಮಾಡಿದರೆ ಮತ್ತೊಂದು ಕನಸು
;ಹಗಲುಗನಸು.

-ಶರತ್ ಚಕ್ರವರ್ತಿ.

ನೀನು ಯಾರು..?

ಅವಳೆಂದಳು ನೀನು ಯಾರು..?
ನನ್ನದೂ ಅದೇ ಪ್ರಶ್ನೆ ; ನಾನು ಯಾರು
ಎದುರಿದೇ ಕನ್ನಡಿ, ಕಣ್ಣಿಗೆ ಕಣ್ಣು ಕೀಲಿಸಿದ್ದೇನೆ
ಕನ್ನಡಿಯೊಳಗಿನ ಕಣ್ಣುಗಳು ಕೂಡ ಹುಡುಕುತ್ತಿವೆ ; ಅದೇನನ್ನೊ
ಮತ್ತೆ ನನ್ನನ್ನೇ ಪ್ರಶ್ನಿಸುತ್ತಿವೆ ; ನೀನು ಯಾರು?

ಕೈಯಿವೆ ಕಾಲಿವೆ ಪಾದಗಳಿಲ್ಲ
ಅಯ್ಯೋ ಪಾದಗಳಿಲ್ಲವ? ಹಾಗಾದರೇ ಪ್ರೇತವೇ?
ಪ್ರೇತಕ್ಕೆ ಪಾದಗಳಿರುವುದಿಲ್ಲವಂತೆ
ಅವ್ವ ಹೇಳಿದ್ದಳು.
ಕಣ್ಣುಗಳಿವೆ, ಮಸ್ತಕದ ಪುರಾವೆಯೂ ಇಲ್ಲ
ಅಲ್ಲೆಲ್ಲಾ ಮುಳ್ಳು ಪೊದೆಗಳು ಒಂದಷ್ಟು ಬಾಡಿದ ಹೂಗಳು
ಸವೆದ ರಸ್ತೆ ಮುರಿದ ಸೌಧಗಳು

ಅರರೇ ಕಿವಿಗಳೆಲ್ಲಿ ಹೋದವು ವಿಶಾಲ ಹಣೆ
ಹಣೆಬರಹಗಳು…?
ಹುಡುಕಬೇಕಾದ ಕಣ್ಣುಗಳು ಪೊದೆಯ ಮರೆಯ ಬೆದೆಗೆ ದೃಷ್ಟಿನೆಟ್ಟಿವೆ.
ಹಸಿ ಹಸಿಯಾಗಿ ಬಿಸುಪುಗೊಂಡ ಕನಸುಗಳು
ಬಿಸಿಯಾಗಿ ಬೆವರುತ್ತಿವೆ ಆ ಕಣ್ಣುಗಳಲ್ಲಿ
ಅದನು ಕಂಡು ಒಂದಷ್ಟು ಲಲನೆಯರು ಛೇಡಿಸುತ್ತಿದ್ದಾರೆ
ಮುಜುಗರ ; ಬೆತ್ತಲಾದಂತೆ
ಇದ್ದೆಲ್ಲಾ ತೆರೆಗಳ ಮೀರಿದಂತೆ
ನಿಧಾನವಾಗಿ ತಲೆಬುರುಡೆ ರೂಪ ಪಡೆಯುತ್ತಿದೆ
ಪಾದಗಳು ಮೂಡತೊಡಗಿವೆ

ಅಸ್ಥಿತ್ವ ಆಕಾಶ ಎರಡು ದಕ್ಕಿವೆ
ನನ್ನೊಳಗೆ ನನ್ನತನವೆದ್ದಿದೆ
ನೆರಳು ಕೂಡ ಈಗ ಪಾದದಡಿಯಲ್ಲೆ
ಗಂಟಲಲಿ ಶ್ವಾಸ ಕಲೆಹಾಕಿ ನಾನೆಂದೆ

“ನಾನು ನಾನೇ”.

ಮುಖ ಗಂಟಿಕ್ಕಿದ್ದವಳು
ನೆಲಬಿರಿವಂತೆ ನಕ್ಕು ನುಡಿದಳು
“ದಡ್ಡ ನೀ ನನಗ್ಯಾರೆಂದು ಹೇಳು”
ಒಮ್ಮೆಲೆ ತೆರೆಗಳು ಕವುಚಿಬಿದ್ದವು
ನಾನೀಗ ನಿರ್ಲಿಪ್ತ.

-ಶರತ್ ಚಕ್ರವರ್ತಿ.

ಮೊದಲ ಸಾಲು…

…………………,
ಮೊದಲ ಸಾಲು ಬಿಟ್ಟು ಎರಡನೆಯದರಲ್ಲಿ ಎಡವಿದ್ದೇನೆ
ಉಗಮತಾಣ ಗೊತ್ತಿಲ್ಲವಾದ್ದರಿಂದ ;
ನೆಟ್ಟಗೆ ನಡೆಯಲು ಕಲಿಯದಿದ್ದರಿಂದ
ಕಲಿತು ಬದುಕುವುದೆಂದರೆ ರೇಜಿಗೆ
ಇದ್ದಂತೆ ಇದ್ದು ಬಿದ್ದ ಗೋಡೆ ಕಟ್ಟದವನು
ಮುಟ್ಟಿಸಿಕೊಳ್ಳದ ವ್ಯಭಿಚಾರಿ ;
ಪೊರೆ ಕಳಚಿ ನಿಂತಿದ್ದೇನೆ

ನುಣುಪು ನಾಜುಕು ಮರೆತು
ಸಿಗಿತು ನಿಂತ ಸಿಬಿರು ; ಹತ್ತರಿ ಒದೆಗೋ
ಕತ್ತರಿ ಬಾಯಿಗೋ ಸಿಗಲಿರುವವನು
ಗೊಂದು ಕುಡಿದು ನುಣುಪಾಗಲಾರೆ ;
ನಿನಗಪ್ಪಿ ನಿಲ್ಲಲಾರೆ
ಬಣ್ಣ ಬಳಿದುಕೊಂಡು ಕಣ್ಣ ಕೆರಳಿಸಲಾರೆ
ನಿನ್ನಾಸೆಗಳಿಗೆಲ್ಲ ಸ್ಥಾವರವಾಗಿ
ಮಹಲು ಕಟ್ಟಲಾರೆ

ಜೊತೆಗಿರುವವುಗಳೆಲ್ಲ ಭ್ರಮೆಗಳು
ಕೊರೆತೆಗಳ ನೆನೆದು ಕೊರಗಲಾರೆ
ಚೌಕಟ್ಟಿನೊಳಗೆ ಕೂರಲಾರೆ
ಈ ಎಲ್ಲವುಗಳೂ ಚೌಕಟ್ಟುಗಳಲ್ಲವೇ
ಎನ್ನುವುದು ನಿನ್ನ ಕೊಂಕುನುಡಿಯಾದರೇ
ಬಾ ಗೆರೆಗಳ ತುಳಿದು, ಚೌಕಟ್ಟುಗಳ ಒಡೆದು
ಮೊದಲ ಸಾಲಾಗು ; ಅನಿವಾರ್ಯವಾದರೆ.
ಸಾವಿನ ಸರಳಸುಂದರಿ ನನ್ನಪ್ಪುವವರೆಗು
ಮಾತ್ರವೇ ನಿನಗವಕಾಶ
ಮೊದಲ ಸಾಲು ನೀನೋ – ಅವಳೋ?
ನಾನಂತೂ ನಿಲ್ಲಲಾರೆ.

-ಶರತ್ ಚಕ್ರವರ್ತಿ

ಶನಿವಾರ, ಏಪ್ರಿಲ್ 13, 2013

ಹೂಗಂಧವಿನ್ನೂ ಉಳಿದೇ ಇದೆ ಕೈ ಬೆರಳುಗಳಲ್ಲಿ

ನನ್ನ ಮುದ್ದಿನ ಚಿಟ್ಟೆ…

ಏನೂ, ದುಪ್ಪಟ್ಟ ಕೊಡವಿ ನೋಡಿಕೊಳ್ಳುತ್ತಿರುವೆಯಾ? ಸಾಕ್ ಸಾಕು ಸುಮ್ನೆ ಅಟ್ಟ ಹತ್ತಿಸಿದೆ. ಆದರೂ ಪತಂಗಕ್ಕೂ ನಿಂಗೂ ತುಂಬಾನೇ ಸ್ವಾಮ್ಯ ಕಣೆ. ನಿನ್ನ ಚೆಲ್ಲುಚೆಲ್ಲಾಟ, ತರಳೆಗಳು ಪತಂಗದ ಬಣ್ಣಗಳಿಗಿಂತಲೂ ಹೆಚ್ಚು ಕಣ್ಣು ಚುಚ್ಚುತ್ತೆ. ಬಿಡು ನೀನೋ ಚಿಟ್ಟೆನ ಮೀರಿಸೋವಷ್ಟ್ ಸುಂದರಿ, ಉಬ್ಬಿಹೋಗಬೇಡ, ಅದು ನನ್ನ ಕಣ್ಣಿಗೆ ಮಾತ್ರ. ಯಾಕಂದ್ರೆ ನನ್ನ ಸ್ನೇಹಿತ ಹೇಳ್ತಿದ್ದ “ಅವಳೇನು ಚನ್ನಾಗಿದಾಳೆ ಅಂತ ಲವ್ ಮಾಡ್ತಿದಿಯೋ” ಅಂತ (ಹ್ಹಿ ಹ್ಹಿ ಹ್ಹಿ…).
ಹುಂ.., ಇರಲಿ. ಹ್ಯಾಪಿ ವೆಲೆಂಟೈನ್ಸ್ ಡೇ ಬೀ ಮೈ ವೆಲೆಂಟೈನ್. ಇದು ನಮ್ಮ 7ನೇ ವರ್ಷದ ಪ್ರೇಮಿಗಳ ದಿನ. ನಂಗೊತ್ತು ನಿನಗೆ ಕೋಪ ಬೇಜಾರು ಎರಡು ಇದೆ ಅಂತ. ಆದ್ರೇನ್ ಮಾಡ್ಲಿ. ನನ್ನ ಪರಿಸ್ಥಿತಿ ಫೋನ್ ಕೂಡ ಮಾಡೋಕಾಗದಂತ ಬೇಲಿ ಹಾಕಿದೆ. ಅಲ್ಲದೇ ಕೋಪದಲ್ಲಿ ಹೊರಡೋ ನಿನ್ನ ಧ್ವನಿಯನ್ನ ಎದುರಿಸೋಕಾಗದೆ ಪತ್ರ ಬರಿತಿದಿನಿ. ಖುಷಿವಿಷಯ ಏನಂದ್ರೆ ನಂಗೆ ಹೊಸ ಕೆಲಸ ಸಿಕ್ಕಿದೆ, ಒಳ್ಳೆ ಸಂಬಳ. ಆದ್ರೇ ನನ್ನ ಜೊಂಪೆ ಕೂದಲಿಗೆ ಕತ್ತರಿ ಬಿತ್ತು, ದಿನ ಶೇವಿಂಗ್ ಮಾಡಿಸಿಕೊಂಡೇ ಕೆಲಸಕ್ಕೆ ಹೋಗಬೇಕು. ಬಹುಶಃ ನೀನೆ ಈ ಕಂಪನಿಯವರಿಗೆ ಹೇಳಿ ಈ ರೂಲ್ಸ್ ಮಾಡ್ಸಿದಿಯೇನೋ ಅನ್ನಿಸುತ್ತೆ. “ಹಂಗೇ ಆಗಬೇಕು ನಿಂಗೆ” ಅಂತಿದೀಯ.

ರಾಸ್ಕಲ್!

ಅಂತೂ ನಿನಂದುಕೊಂಡಂಗೆ ಆಯಿತು, ಖುಷಿಪಡು. ಅಲ್ಲೆಲ್ಲೊ ಮರೆಯಲ್ಲಿ ನಿಂತು ನಿನ್ನ ದಾರಿ ಕಾದು ಬೇಕೆಂದೆ ಎದುರು ಸಿಗುವಾಗ ಅದೆನೋ ಒತ್ತಡ. ನೀನು ಸನಿಹವಾದಷ್ಟು ಹೆಜ್ಜೆಗಳು ನಡುಗುತ್ತಾ ಎದೆ ನಗಾರಿ ಬಡಿದಂತೆ ಆಗುತ್ತಿತ್ತು, ಉಸಿರಾಡಲೂ ಕೂಡ ಅದ್ಯಾಕೋ ಕಷ್ಟವಾಗುತ್ತಿದೆ ಎನ್ನಿಸುವಂತೆ. ಆಗೆಲ್ಲ ನಾನಂದುಕೊಳ್ಳುತ್ತಿದ್ದೆ. ನೀನೆನಾದರು ಆಗ ಮಾತನಾಡಿಸಿಬಿಟ್ಟರೆ ಗುಂಡಿಗೆ ನಿಂತೆಬಿಡುತ್ತದೆ ಎಂದು. ಆದರೆ ಇದೆಲ್ಲ ಹೇಗೆ ಆಯಿತೊ ನಿಜವಾಗಿಯೂ ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ನನ್ನ ಮೇಲೆಯೇ ನನಗೆ ಅನುಮಾನ, ಭ್ರಮಾನಿರತನಾಗಿಬಿಟ್ಟನೇ ಎಂದು, ನಿಜವಾಗಿಯೂ ನನ್ನ ಪಕ್ಕ ಕುಳಿತಿರುತ್ತಿದ್ದುದು ನೀನು ಎಂಬುದು ಇಂದಿಗೂ ಕಾತರಿ ಇಲ್ಲ. ಮಾತಾಡಲು ಹಂಜಿಕೆಪಡುತ್ತಿದ್ದವನು ಅದೇಗೆ ನಿನ್ನ ಜೊತೆ ಕಿತ್ತಾಡುತ್ತ, ಬೈಸಿಕೊಂಡು, ಪರಚಿಸಿಕೊಂಡು ನೆಮ್ಮದಿಪಡುತ್ತಿದ್ದೆ ಎಂಬುದು ಇವೋತ್ತಿಗು ಅನುಮಾನವೇ ಕಣೆ, ಯಪ್ಪಾ ಬಜಾರಿ, ನೀನು ಮುನಿಸಿಕೊಂಡಾಗಲಂತು ತಪಸ್ಸು ಮಾಡಿದ್ದೇನೆ ಕಣೆ. ಆಡಬಾರದ ನಾಟಕಗಳನ್ನ ಆಡಿ ನಗಿಸಲು ಯತ್ನಿಸಿ ಸೋತಿದ್ದೇನೆ. ಎಷ್ಟು ಕಾಡಿಸಿದ್ದೆ ಕಣ್ಣಿರು ಹಾಕಿಸಿದ್ದೆ ನೀನು. ಸೇಡಿ ತೀರಿಸಿಕೊಳ್ಳಲು ನನ್ನೆಲ್ಲಾ ಶಕ್ತಿಯನ್ನ ಒಟ್ಟುಗೂಡಿಸಿಕೊಳ್ಳುತ್ತಿದ್ದೇನೆ. ಇವೆಲ್ಲ ಯಾಕೆ ಹೇಳುತ್ತಿದ್ದೇನೋ ಕಾಣೆ. ಇಂತ ತಿಕ್ಕಲು ಭಾವಗಳು ಪ್ರೀತಿಯಲ್ಲಿ ಮಾತ್ರವೇ ಯಾಕೆ ಇರುತ್ತದೆಯೋ ಗೊತ್ತಿಲ್ಲ ಕಣೆ.

ನೀನು ಇಲ್ಲಿಂದ ನಿಮ್ಮೂರಿಗೆ ಹೋದಮೇಲೆ ನಾವು ಅಡ್ಡಾಡಿದ ಜಾಗಗಳು ತುಂಬಾನೇ ಕಾಡಿಸೋಕೆ ಶುರು ಮಾಡಿವೆ. ಮಾಸ್ತಮ್ಮನ ಗುಡಿಯ ಹಿಂದೆ ಮೊದಲ ಬಾರಿ ನಿನ್ನ ತುಟಿಗಳನ್ನ ಕಚ್ಚಿದ ದಿನ ಕೆತ್ತಿದ್ದ ನಮ್ಮ ಹೆಸರುಗಳನ್ನ ಅಳಿಸಿಹಾಕಿದ್ದಾರೆ, ಅದೆನೋ ದೇವಸ್ಥಾನದ ಜೀರ್ಣೋದ್ಧಾರವಂತೆ. ನೀನಿದ್ದ ಮನೆಯ ಹತ್ತಿರನೂ ಹೋಗಿದ್ದೆ. ಆ ಬೀದಿ ತುಂಬೆಲ್ಲಾ ಜಾತಿ-ಜನಿವಾರಗಳ ಕೊಳಕು ಚರಂಡಿ ತುಂಬೆಲ್ಲಾ ಹರಿಯುತ್ತಿತ್ತು. ಅಕ್ಕ-ಪಕ್ಕದ ಬೇಲಿ ಹೂಗಳು ಸಹ ಸುಗಂಧ ಮರೆತುಬಿಟ್ಟಿದ್ದಾವೆ ಕಣೆ. ಇತ್ತೀಚೆಗೆ ನಮ್ಮೂರಲ್ಲಿ ಗೋಧೂಳಿ ಕಿರಣಗಳಂತೂ ಸುಡುವಷ್ಟು ಜ್ವಲಿಸುತ್ತಿವೆ. ಹೊತ್ತುಕರಗುವ ಮುನ್ನ ನಾವೂ ಅಪ್ಪಿಕೊಂಡಾಗ ಹೊಮ್ಮುತ್ತಿದ್ದ ನಿನ್ನ ಮೈಬೆವರ ಕಮಟು ಗಂಧವನ್ನ ಹುಡುಕುತ್ತಿರುತ್ತೇನೆ. “ಹಾಗಾದ್ರೆ ಮರೆತುಬಿಟ್ಟಿದ್ದೀಯಾ” ಎನ್ನಬೇಡ. ಏನುಮಾಡಲಿ, ಈ ಚರಂಡಿ ಹೊಲಸು ಊರನ್ನೇ ಆವರಿಸಿಕೊಂಡುಬಿಟ್ಟಿದೆ. ಯಾಕೋ ತುಂಬಾ ನೆನಪಾಗ್ತಿಯ ಕಣೆ. ರಾತ್ರಿಯ ನಿರವತೆ ಕಿವಿಕಚ್ಚುತಿರುತ್ತೆ. ಅಲ್ಲೆಲ್ಲೊ ನಿನ್ನ ನಗು, ಆ ಕಾಲ್ಗೆಜ್ಜೆ ಸದ್ದು ಸದ್ದಡಗಿ ಹೋಯ್ತೆನೋ ಅನ್ನಿಸುತ್ತಿರುತ್ತೆ. ಇನ್ನೂ ಕಾಯಲಾರೆ, ನಿನ್ನ ಸೇರಲೆಬೇಕೆಸಿದೆ. ಯಾವ ಕಟ್ಟುಕಟ್ಟಳೆಗಳಿಲ್ಲದ, ಅಂತಸ್ತಿನ ಅತಿ-ಮಿತಿ, ಜಾತಿಗಳ ಆಳ-ಅಡಿಗಳೂ, ಕನಿಷ್ಟ ಸರಿ-ತಪ್ಪುಗಳ ಭಯದಿಂದ ಹೊರತಾದ ಲೋಕವೊಂದಿದೆಯಂತೆ, ಅಲ್ಲಿ ಸೇರೋಣ. ನಿನ್ನ ರೆಕ್ಕೆಗಳೆಲ್ಲಿ ಸುಟ್ಟಾವೋ ಎಂಬ ಭಯಕೆ ನನ್ನ ಚೈತನ್ಯ ನಂದಿಹೋಗಿದೆ. ಕ್ಷಮಿಸೇ ಪತಂಗ. ನಿಟ್ಟುಸಿರು ಸದ್ದಡಗಿದೆ. ಕಣ್ಣಾಲಿಗಳು ತುಂಬಿ ಎಲ್ಲಾ ಮಾಸಲು ಮಾಸಲು. ನಿಲ್ಲಿಸಿಬಿಡುತ್ತೇನೆ. ಹ್ಹಾ.. ಮರೆತಿದ್ದೆ. ಎಲ್ಲರನ್ನು ಕೇಳಿದೆ ಅಂತ ಹೇಳು.

ನಿನ್ನ ಗಂಡನನ್ನೂ…

ಇಷ್ಟೆಲ್ಲಾ ಹೇಳಿದ ಮೇಲೂ ಪತ್ರವನ್ನ ಪೋಸ್ಟ್ ಮಾಡುವುದನ್ನು ಬೇಕೆಂದೆ ಮರೆತಿರುತ್ತೇನೆ. ಎಂದಿನಂತೆ ಶಪಿಸಿಕೊ.

ಕಯ್ಯಾರೆ ಕುಯ್ದು ತಂದು
ಮಾಲೆ ಕಟ್ಟಿದ ಹೂ
ಮತ್ಯಾರದೋ ಮುಡಿಯೇರಿದೆ
ಹೂಗಂಧವಿನ್ನೂ ಉಳಿದೇಯಿದೆ
ಕೈ ಬೆರಳುಗಳಲ್ಲಿ.

-ಶರತ್ ಚಕ್ರವರ್ತಿ
14-02-13