ಸೋಮವಾರ, ನವೆಂಬರ್ 28, 2011

ನಿತ್ಯ ಸುಮಂಗಲಿ

ನಲುಮೆಯ ನುಡಿಗಳನಾಡುತ
ಪ್ರಣಯ ಚೇಷ್ಟೆಗೈಯ್ಯತ
ಪ್ರೇಮ ರಸಧಾರೆಯನ್ನರಿಸಿಹನು
ನನ್ನಾಸೆಗಳನು ಮೆಟ್ಟಿನಿಂತು
ಮೈಮುರಿದು 
ನನ್ನದೆಲ್ಲ ಅವನದೆಂದೇ ಅಧಿಕಾರಿಸಿಹನು


ಭಿಗುಮಾನದ ಏರಿಳಿತದಲಿ
ತುಂಬಿದೆದೆ ತಲ್ಲಣಿಸಿಹುದು

ಇವನಾಗುವನೇ ಎನ್ನ ಮನದಿನಿಯ
ಹಾರೊಡೆದ ಎದೆಯಲಿ
ಬಂಧಿಸಿದ ಆಸೆಗಂಗಳು ಮುಚ್ಚಿ 
ತೆಲಿಹವು ಕನಸಕೊಳದಲಿ


ರವಿ ಬಂದು ಶ್ಯಾಮ ತೊಲಗಿರೇ 
ಒಂಟಿಯಾಗಿಹುದು ಮೈಮನ 
;ವಾರಸುಧಾರನಿಲ್ಲದೆ
ಕಾದು ಕಾತರಿಸಿಹವು ಕಂಗಳು 
ಸುಮಂಗಲಿಯಾಗುವ ನಿತ್ಯ ಕನಸಿನ ಅಮಲಲಿ

ಖಾಲಿ ಹೊಟ್ಟೆಯಲ್ಲಿ ಕನಸುಗಳ ಮೂಟೆಕಟ್ಟಿ 
ಹಸಿದು ಕಾದವರ ತೃಷೆ ನೀಗಲು 
ಹಾಧರಿಸಿರುವೆ..
ಓ... ತೃಷಿಕನೇ ಕಾಣದೇ 
ನಿನ್ನಲ್ಲೆನ್ನ ಆಂತರ್ಯ ಅಂಗಲಾಚಿಹುದು
ನೀಡು ಗರತಿಯಾಗೋ ಚೈತನ್ಯ.


-ಶರತ್ ಚಕ್ರವರ್ತಿ.

ಶನಿವಾರ, ನವೆಂಬರ್ 19, 2011

ನೀ ಚಂದಿರಳೇ..?

ಎಷ್ಟೇ ಹೊಳಪಿದ್ದರೂ
ಸ್ವಂತಿಕೆಯಿಲ್ಲದ 
ಹುಣ್ಣಿಮೆ ಸೂರ್ಯನ ಪ್ರತಿಫಲನ
ಭಿಂಕದಲಿ ಬೀಗೊ
ನಿನ್ನ ರಾಶಿ ರಾಶಿ 
ಸೌಂದರ್ಯ ನನ್ನ ಕಣ್ಣಗಳ ಪ್ರತಿಫಲನ!

ಶರತ್ ಚಕ್ರವರ್ತಿ.

ಬುಧವಾರ, ನವೆಂಬರ್ 16, 2011

ಮಿಂಚು

ಬೆಳಕಾಗಿ ಬಾ... ಬೆಳದಿಂಗಳಾಗಿ
ಬಾ... ಎಂದು ಹಾಡಿರೇ
ಮಿಂಚಾಗಿ ಬಂದಳು ದೃಷ್ಟಿಯನ್ನೇ
ಹೊತ್ತೊಯ್ದದಳು....!

ಶರತ್ ಚಕ್ರವರ್ತಿ.



ಪತಂಗ

ಸುಟ್ಟು ಬೂದಿಯಾಗುವೆ
ಎಂಬ ಅರಿವಿದ್ದರೂ ಏಕೆ
ಎನ್ನನೇ ಸುತ್ತಿ ಸುತ್ತಿ ಬರುತಿರುವೆ..
ನಿನ್ನ ಕೋಮಲ ರೆಕ್ಕೆಗಳ
ಸುಡುವ ಮನಸ್ಸಿಲ್ಲದೇ
ಇಗೋ ನಾನೇ ನಂದಿಹೋಗುತಿರುವೆ.


ಶರತ್ ಚಕ್ರವರ್ತಿ.


ಚಳಿ

ನವಂಬರ್ ಚಳಿ, ಭಾರವಾದ
ಕಂಬಳಿ ಹೊದೆಯಲು
ಇಚ್ಚಿಸಿರಲು ನಿನ್ನ ನೆನಪುಗಳು
ಬೆಚ್ಚಗೆ ಭಿಗಿದಪ್ಪಿದವು.

ಶರತ್ ಚಕ್ರವರ್ತಿ.
ದಿನಾಂಕ :16.11.2011


ಭೈರಾಗಿ..!

ಬದುಕ ತೊರೆದು 
ಭೈರಾಗಿಯಾಗಲಿರುವೆ
ಹೇಳು ಹುಡುಗಿ...
ಮುಂದೊಂದು ದಿನ
ನಿನ್ನ ಮನೆಯ
ಮುಂದೆ ಕುಳಿತು
'ಭವತೀ ಭಿಕ್ಷಾಂದೇಹಿ'
ಎಂದರೆ 
ನೀ ಏನ ನೀಡುವೆ...?

ನೀ ಕಳೆದ
ಬದುಕಿನುತ್ಸಾಹವ
ಮರಳಿಸುವೆಯ,
ಛಿದ್ರಗೊಂಡ ನನ್ನ
ಹೃದಯವ ಕೂಡಿಸಿ
ಪೋಣಿಸಿ ಕೊಡುವೆಯ
ಅಥವಾ "ತನ್ನಿಂದ
ಇವ ಇಂತಾದನಲ್ಲ"
ಎಂದು ಮರುಗುವೆಯ


ಬೇಡ ಅದಾವುದೂ
ಬೇಡ, ನಾ ಬೇಡಿ
ಬಂದಿರುವೆ ಪ್ರೀತಿಯ
ಸುರಿಸದೇ, ಪ್ರೇಮ
ಮಮತೆಗಳ ಬೆರೆಸದೇ
ಸತ್ತ ನೆನೆಪನು
ತರಿಸದೇ ಮಾಡಿದ
ಮುರುಕು ರೊಟ್ಟಿ

ಅಷ್ಟೇ ಸಾಕು...
ಬದುಕ ತೊರೆದ ಭೈರಾಗಿ ಇವ...!


-ಶರತ್ ಚಕ್ರವರ್ತಿ.
ದಿನಾಂಕ: 16.11.2011

ಶುಕ್ರವಾರ, ನವೆಂಬರ್ 11, 2011

ಚೈತ್ರೋತ್ಸವ..!

ಅದಿನ್ಯಾವ ವಿಪತ್ತಿಗೋ…. ಕಾಣೆ, 
ಒಲವೇನಿನ್ನ ಹಂಬಲಿಸಿ ಎದೆ ಕೂಗಿದೆ 
ಬಾ….. ತಾ ಬದುಕಿಗೆ ನವ ಋತುಮಾನಗಳನೆ
ನಿನ್ನೇಲ್ಲಾಗಳನು ನೋಡಲು ಕಾತರಿತ ನಾ

ಹಸಿರೆಲೆ ಹೂಬಣ್ಣ, ಸುಗಂಧ ತಳಿರು 
ಕಿಲ-ಕಿಲ ಕಲರವಗಳ ಕೂಡಿ 
ಗುನುಗುನಿಸುವ ತರುಣಿಯೇ
ನಿನ್ನಾ ಕುಣಿವ ರೆಪ್ಪೆಗಳಡಿ ಮಿನುಗೋ 
ನವ ಚಿಗುರ ಚೈತ್ರೋತ್ಸವವ ನೋಡಲು ಕಾದಿರುವೆ

ಬಾಳ ಉದ್ಯಾನದಲಿ ಪಾಲ್ಗುಣನು ಹರಡಿದ 
ಹೂ ಎಲೆಗಳ ಹಾದಿಯಲಿ 
ಒಲವೆ ನಿನ್ನೊಡನೆ ಹೆಜ್ಜೆ ಮೂಡಿಸುವಾಗ 
ಮುಳ್ಳೊಂದು ನಿನ ಪಾದವ ಚುಚ್ಚುವ ಮೊದಲು 
ಚುಚ್ಚಿಬಿಡೆಲೆನ್ನ ಕಣ್ಣನೆ

ಮುನಿದು ಕಪ್ಪಾಗಿ ಗುಡುಗಿ ಮಿಂಚಾಗಿ 
ಮುತ್ತಾಗಿ ಮಣಿಯಾಗಿ ಸುರಿದು 
ಎನ್ನ ಅಪ್ಪದಿದ್ದರೂ 
ಬಾ..ಮಳೆಯೇ...! ಎಂದಾಡದೇ 
ಕೊರಗಿ ಕಣ್ಣರಾಗಿ ಹರಿಯದೇ ಕಾಯುತ 
ಧ್ಯಾನಿಸುವೆ ನಿನ್ಹಾದಿಯ

ಹೂಎಲೆಗಳುದುರಿ ಭೂಮಿಬಿರಿದು ಬಾಯ್ತೆರೆದು
ಒಲವ ಋತುಮಾನಗಳೆಲ್ಲವೂ ಕಳೆದಿರಲು

ಮತ್ತೊಂದು ಚೈತ್ರಕೆ ಕಾಯದೇ ಉದುರೋ ಹೂವಂತೆ 
ಉದುರಿ ಮಣ್ಣಾಗಿ ಮರೆಯಾಗುವೆ.

-ಶರತ್ ಚಕ್ರವರ್ತಿ.
ದಿನಾಂಕ: 11.11.11
ಫೋಟೋ ಕೃಪೆ: ಗೌರೀಶ್ ಕಪನಿ.

ಶುಕ್ರವಾರ, ಅಕ್ಟೋಬರ್ 21, 2011

ಈ ನಿನ್ನ ಹಠವೇಕೆ..?

ಶ್ವಾಸವ ಮರೆತು ಮಡ್ಡಿಯಾದ ಜಡ ಬಂಡೆಯಿದು 
ಕುಟ್ಟಿ ಕೆಡುವಿ ಕೆತ್ತಿ ರೂಪಿಸುವ ಹಠವೇಕೆ.
ಹೇ ಸರಳ ಸುಂದರ ತಂಗಾಳಿ
ಸಾಧ್ಯವೇ ನಿನಗಿದು? 
ಸುಮ್ಮನೆ ಇದ್ದುಬಿಡು ; ಆಗುವ ಬದಲು ಹೈರಾಣ.

ಇಂದ್ರಿಯಗಳ ಕೊಂದು 
ಕುರುಡ ಜಡ ಮೌನಿಯಾಗಿ 
ಏಕಾಂತ ಧ್ಯಾನಗಳಲ್ಲೇ ಮರೆಯಾಗಲಿರುವೆ.
ಎನಗೇಕೆ ಕಿವಿ-ಮೂಗು-ಕಣ್ ಮನಗಳ 
ಮೂಡಿಸಿ ; ಕೂಡಿಸಿ
ಭಾವರೂಪ ನೀಡ ಹೊರಟಿರುವೆ.


ನೀಡುವುದಾದರೆ ನೀಡು 
ನೋವಿಲ್ಲದ ಮನವ 
ನೆನಹುಗಳಿಲ್ಲದ ಕಂಗಳ
ಮಾಧುರ್ಯದ ಅರಿವಿಲ್ಲದ ಕರ್ಣಗಳ.
ಮಡಿದ ಹೃದಯಾಂತಕರಣಗಳಿಗೆ 
ಪುನರ್ ಜನ್ಮವೀಯಲೇ ಬೇಕಿದ್ದರೆ ಬಾ
ಸೇರು ಈ ತನುಮನಕೆ ಶುದ್ದ ಶ್ವಾಸವಾಗಿ.

-ಶರತ್‌ ಚಕ್ರವರ್ತಿ.




ಸೋಮವಾರ, ಅಕ್ಟೋಬರ್ 10, 2011

ವಿರಹ ನಾದ


ಸುರಿವ ಮಳೆ, ಭರದ ಗಾಳಿ
ಮುರಿದ ಕೊಳಲು, ಹರಿದ ತಂತಿ
ಒಡೆದ ಸ್ವರ, ಮರೆತ ಸಾಲು
ಕೊರೆವ ನೆನಪು, ಕೊರಗೊ ಮನಸ್ಸು
ಹದವಾಗಿ ಬೆರೆತು, ಕಲೆತು
ಹರಿದಿದೆ ವಿರಹ ನಾದ
ಅರಿವಿಲ್ಲದೆ ಪಲ್ಲವಿ ಚರಣ ಪಾದ.

ಶರತ್‌ ಚಕ್ರವರ್ತಿ

ಮೊಳಕೆ


ಹಾಸನದಲ್ಲಿ ತುಂಬಾ ಮಳೆ..
ಮೊಳಕೆಗಳು ಮೆಲ್ಲನೆ ಮೂಡುತಿವೆ
ಮನಸ್ಸು ಪುಡಿಯಾಗಿ, ಮಣ್ಣಾಗಿ
ಕರಗಿ ಕೊಳೆತು ಗೊಬ್ಬರವಾಗಿ
ಮತ್ತೇ ಇದೀಗ ಸಡಿಲವಾಗಿ
ಹೊರಬರುತ್ತಿವೆ ಹೂತಿಟ್ಟ ನೆನಪುಗಳು
ಮೊಳಕೆಗಳಾಗಿ.


ಶರತ್‌ ಚಕ್ರವರ್ತಿ


ನನ್ನೊಡಲ ಪದಗಳು.


ಪರಿತಪಿತ ವಯಸ್ಸಿನ ಪರಿಭಾವವೊ
ಮಿಡಿತಗಳ ಕಾಣದ ಕರವೊ
ತುಡಿತಗಳ ಸೆಳಕಿನ ವರವೊ
ಹುಚ್ಚು ಭಾವನೆಗಳ ಆರ್ಭಟವೊ
ಸಿಹಿ-ಕಹಿ ನೆನಪುಗಳ ತಿಕ್ಕಾಟವೊ
ಕನ್ನಡ ಪದಗಳ ಮೇಲಿನ ಒಲವೊ
ಹಪಹಪಿಸುವ ಮನದ ದುಗುಡವೊ
ಕಾಣೆ.. ನಾ ಕಾಣೆ,
ಹರಿವವು ಒಡಲ ಕಿತ್ತು ರಭಸದಿ
ಮನವ ಜಾರಿಸೊ ಝರಿಯಂತೆ
ನನ್ನೊಡಲ ಪದಗಳು.


ಶರತ್‌ ಚಕ್ರವರ್ತಿ
ದಿನಾಂಕ: 09.10.2011

ಸಮಯ


ಸಮಯವ ಕೊಲ್ಲುವುದೇ
ಅದು ಹೇಗೆ...?


ನಿತ್ಯ ಕಾಯಕದೊಳು
ನಿಜಕಾಯವನ್ನೇ ಮರೆತವರ ನಡುವೆ.


ಕಣ ಕಣ ಕ್ಷಣಗಳ ಕುದಿಸಿ
ಧ್ಯಾನಿಸಿ ಮಂತ್ರಿಸುವವರ ನಡುವೆ.


ಕಾಲದೊಡನೆ ಹಠಕ್ಕೆ ಬಿದ್ದು
ಕಾಲವೇ ಕಾಸೆಂಬಂತೆ ಕಾಣುವವರ ನಡುವೆ.


ಅದು ಹೇಗೆ ಸಾಧ್ಯ
ಸಮಯವ ಕೊಲ್ಲಲು...?


ನಾವ್ ಕೊಲ್ಲುವ ನಮ್ಮ ಬೇಸರಗಳ, ಕಾಡುವ
ನೆನಪುಗಳ, ರಚ್ಚೆಗೆ ಹಿಡಿಸುವ ಮನದುದ್ವೇಗಗಳ..


ಕಾಯುವ ಮನಶ್ಯಾಂತಿಯ
ಕಳೆಯದೇ ಈ ಸುಸಮಯವ.


ಶರತ್‌ ಚಕ್ರವರ್ತಿ
ದಿನಾಂಕ:09.10.2011

ಶನಿವಾರ, ಅಕ್ಟೋಬರ್ 1, 2011

ಹನಿ..


ನಿನ್ನ ಕಳೆದು ಬದುಕಲೆತ್ನಿಸಿ
ದಾರಿ ಮರೆತು ನಿಂತಿರುವೆ
ತಿರುಗಿ ನೋಡಿದರೆ ನೆರಳಿಲ್ಲ
ಅರಿತೆನಾಗ...
ಓ ಬೆಳಕೆ ನನ್ನೊಡೆನೆ ನೀನಿಲ್ಲ.


ಶರತ್‌ ಚಕ್ರವರ್ತಿ.
30.09.11

ಹನಿ..


ಓ...., ಭಾವವೇ ನೀ ಏನು ಮಳೆಬಿಲ್ಲೆ..?
ಎಲ್ಲಾ ಕನಸಿನ ಬಣ್ಣಗಳ ಮಿಶ್ರಣ
ಮನದ ಮುಗಿಲ ಮಂಟಪದ ತೋರಣ
ಕಣ್-ಮನ ಸೆಳೆತಕೆ ಕಾರಣ
ಹೊಸ ಚಿತ್ರಪಟಕೆ ಪ್ರೇರಣ
ಆದರೆ....,


ಕಳೆದೊದ ಒಲವಿನಂತೆ ಕರಗಿದೆ ಕ್ಷಣದಲಿ, ನೀಡು ಬಾ ವಿವರಣ


ಆಗಲೇಬೇಕು ವಿಚಾರಣಾ....!

ಶರತ್‌ ಚಕ್ರವರ್ತಿ.
29.09.2011

ಬುಧವಾರ, ಸೆಪ್ಟೆಂಬರ್ 28, 2011

ಭಾವಬಂಧನ.


ಓ... ಒಲವ ಮಾರಿಯೇ....!
ಇನ್ನೆಷ್ಟು ನಿನ್ನ ಸಾಮ್ರಾಜ್ಯಶಾಹಿ ವಾಂಛೆ..

ಮುಗಿದಿಲ್ಲವೇ ಹಸಿ ಮುಗ್ಧ ಹೃದಯಗಳ
ಮೇಲೆ ನಿನ್ನ ನಿಷ್ಕಾರುಣ್ಯ ಆಕ್ರಮಣ..

ಸಾಲದಾಯಿತೆ ಎಳೆ ಮನದ ತಿಳಿ ಪನ್ನಿರ
ಕೊಳವ ರಕ್ತಸಿಕ್ತ ಕೆನ್ನೀರಾಗಿಸಿದ್ದು..

ನಿನ್ನ ಸೆರೆಯೊಳು ವಿಷ-ಪಾನಮತ್ತರಾಗಿ ಬಾಳ
ಹಾದಿಯ ಕಳೆದರೂ ತೀರಲಿಲ್ಲವೇ ನಿನ್ನ ಅರಿಕೆ..

ಮನದ ಅಪಸ್ವರಗಳಿಗೆಲ್ಲ ಕಾರಣೀಭೂತವಾದ
ನಿನ್ನ ಸದ್ದಿಲ್ಲದ ನಡಿಗೆ ಏಕಿಂದು ನನ್ನೊಳು..

ಸಾಕು ನಿಲ್ಲಿಸು ನಿನ್ನೀ ವಶೀಕರಣ, ಓ ಒಲ್ಲದ
ಒಲವೇ ಆಗಿರುವೆ ನಿನ್ನೊಳು ಭಾವಬಂಧನ.


ಶರತ್‌ ಚಕ್ರವರ್ತಿ.

ಸೋಮವಾರ, ಸೆಪ್ಟೆಂಬರ್ 26, 2011

ಭ್ರಮಾನಿರತ....!


ಎರಡೇ ಎರಡು ಪುಟ್ಟ ಕಂಗಳನ್ನು ಕೊಟ್ಟನು,
ಬೆಟ್ಟ ಕಣಿವೆ, ಹೊಸ ಚಿಗುರುಗಳಲ್ಲಿ
ಗಿಡ-ಬಳ್ಳಿ, ಸಣ್ಣ ತೊರೆಗಳಲ್ಲಿ
ಚುಂಬಕ ತೆರದಿ ನಿನ್ನಂದ ತುಂಬಿಟ್ಟನು..

ಅರಿಯೇ, ಅದು ಹೇಗೆ ತುಂಬಿಸಿಕೊಳ್ಳಲಿ ನಿನ್ನ
ಸೊಬಗು, ಭಿಂಕ-ಭಿನ್ನಾಣಗಳಿಂದ
ಸೆಳೆವ, ನಯಾ-ನಾಜುಕುಗಳಿಂದ
ತಳತಳಿಸುವ ಅಂದಗಾತಿಯೇ ನಿನ್ನ.

ಸಾಲದು, ಸಾಲ ನೀಡು ನಿನ್ನ ಕಡು ನೀಲ
ಕಂಗಳ, ಹರಿದು ಸಾಗುವ ಮೋಡವ
ತಡೆದು, ಮುದ್ದಿಸಿ ಸೆಳೆದು ಮುತ್ತಿಡುವ
ನಿನ್ನ ಮನದ ಒಳಬಣ್ಣ ನೋಡೊ ಹಂಬಲ


ಚೌಕಟ್ಟಿನೊಳು ಕಟ್ಟಿ ಹಾಕುವ ಸಲುವಾಗಿ ಕ್ಲಿಕ್ಕಿಸಿದೆ
ಪೋಟೋ ಸಾವಿರ ಸಾವಿರ, ಮುತ್ತಿದ ಮಂಜಿನ
ಮುತ್ತಲ್ಲಿ ಮಿಂದ ನಿನ್ನ ತಾಜ ನಗೆಯ ವಿನಃ
ಸೋತು ರಸಹೀನವಾದ ನಿನ್ನದೇ ಪೋಟೋ ಮೊಬ್ಬಾಗಿದೆ..


ಚಿತ್ರಿಸಲೇ ಕುಂಚವನವಲಂಭಿಸಿ...?
ಪದ್ಯವ ಕಟ್ಟಲೆ ಪದಗಳ ತುಂಬಿಸಿ...?

ಕಣ್ಣಂಚಲಿ ಕದ್ದ ಬಣ್ಣವ ಭಿತ್ತಿಯಲಿ ಹೇಗೆ ಇಳಿಸಲಿ
ಮನದಾಳದಲ್ಲಿ ಉದ್ಗಾರದ ದನಿಯೊಂದೇ
ತುಂಬಿರಲು ಪದಗಳನ್ಹೇಗೆ ಮೂಡಿಸಲಿ..


ನಿಶ್ಯಕ್ತನಾಗಿ ಕುಂಚ ಬಣ್ಣಗಳ ಬದಿಗಿಟ್ಟು,
ಬಾವಾ ಪದಗಳ ಖಾಲಿಮೂಟೆಯ ಕೈಬಿಟ್ಟು
ನೋಡುತ ನಿಂತೆನು ನಾನಾಗಿ ಭ್ರಮಾನಿರತ....!









ಶರತ್‌ ಚಕ್ರವರ್ತಿ.
ದಿನಾಂಕ: 24.09.2011
ಬಿಸಲೆ ಸೌಂದರ್ಯ ತಾಣವ ಕುರಿತು ಬರೆದ ಸಾಲುಗಳು.



ಬುಧವಾರ, ಸೆಪ್ಟೆಂಬರ್ 7, 2011

ಸೋನೆಯೊಡನೆ ಸರಸ....!


ಸಂಜೆಯ ಮೊಬ್ಬುಗತ್ತಲೆ..
ಚಿಟಿ ಚಿಟಿ ಚಿಟುಗುಡುತ್ತಿತ್ತು ಸೋನೆ ಮಳೆ.

ಜನಸ್ತೋಮವಿಲ್ಲದೇ ವಿಶ್ರಾಂತಿಯಲ್ಲಿ ಮಿಂದು ಮಲಗಿತ್ತು ಡಾಂಬರು ರಸ್ತೆ,
ಎದ್ದು ಕಾಣುತ್ತಿತ್ತು ಜಗತ್ತಿನ ವ್ಯಾಪಾರದಲ್ಲಾಗಿದ್ದ ಅಸ್ಥ-ವ್ಯಸ್ಥೆ.

ಮಳೆಯಭಯಕೆ ತಲೆಮರೆಸಿ ನುಸಿಯುತ್ತಿತ್ತು ಮೊಬ್ಬುನೆರಳು,
ಬೆಚ್ಚನೆ ಹತ್ತಿ ರುಮಾಲು ಸುತ್ತಿದ್ದವು ಚಳಿಪೀಡಿತರ ಕೊರಳು.

ಕೆಸರಿಂದ ತುಂಬಿ ಅಂಗಾತ ಬಿದ್ದಿತ್ತು ಕಾಲ್ನಡಿಗೆಯ ಫ್ಲಾಟು
ನೆನೆದೊಡನೆ ದಿಗಿಲಾಯ್ತು ನಾ ಧರಿಸಿದ್ದು ಹಚ್ಚ ಬಿಳಿಯ ಪ್ಯಾಂಟು

ಕೊಳಕಾದರೆ..? ಮುಗುಳ್ ನಕ್ಕೆ, ಕಲೆ ಒಳ್ಳೇದೇ...
ಆದರೇ... ಚಿಂತೆಯಾಯಿತು, ನನ್ನ ಕೊಳೆ ನಾನೇ ತೊಳಿಯೋದೇ

ಮುದುಡಿ ಪ್ಯಾಂಟು ಮುಕ್ಕಾಲು ಮಾಡುತ್ತಾ
ಮೆಲ್ಲನೆ ಅಡಿಯಿಟ್ಟೆ ಚಳಿಯಿಂದ ನಡುಗುತ್ತಾ

ಕೆಸರಿಗೆ ಅಂಜೀ ಹೆಜ್ಜೆಯಾಯ್ತು ಅಡಿ ಅಡಿ
ಮಳೆಯ ಮೇಲೆ ಮನಸ್ಸಾಯ್ತು ಕಿಡಿ ಕಿಡಿ

ಹೇಗೋ ತೆವಳುತ್ತಾ ಜೀಕುತ್ತ ಜಿಗಿಯುತ್ತಾ ಸಿಕ್ಕಿತ್ತು ರಸ್ತೆಯ ಮೂಲೆ
ಕಂಡಳು ಮಳೆಯಲ್ಲಿ ತೊಯ್ದು ಮುದ್ದೆ ಮುದ್ದೆಯಾಗಿದ್ದ ಬಾಲೆ

ಕಣ್ ಗಳ ಸೆಳೆದಿತ್ತು ಹಸಿ ಹಸಿಯಾದ ಅಂದ
ತೊದಲಿತು ಮನವೂ, ಆಹಾ... ಇವಳು ಅದೇಷ್ಟು ಚಂದ..!

ಉಲ್ಲಾಸಿತನಾದೇ, ಮೈಮರೆತೇ, ಮುಂದಡಿಯಿಟ್ಟೆ...

ಕಾಲು ಜಾರಿತು.....

ಮರುಕ್ಷಣ ನಾನಾಗಿದ್ದೆ ಮಣ್ಣಿನ ಗೊಂಬೆ
ಕಂಗೇಡಿಸಿ ಕಣ್ಮರೆಯಾಗಿದ್ದಳು ಆ ಮಾಯಾ ರಂಬೆ.

ಶರತ್‌ ಚಕ್ರವರ್ತಿ.


ಜುಲೈ 19, 2011

ಬೆಳದಿಂಗಳು...


ಶುದ್ದ ಆಷಾಡದ ಪೌರ್ಣಮಿಯ ರಾತ್ರಿಯೊಳು
ಕನಸಿನಿಂದೆಚ್ಚೆತ್ತು ನಿದ್ರಾಹೀನನಾಗಿ
ಚಳಿಯಲ್ಲಿ ಮೈದಡವುತ್ತಾ ಹೊರನಡೆದಾಗ
ಕಂಡೆ....
ಹಾಲುಕೊಡ ಚೆಲ್ಲಿದಂತಿದ್ದ ಮುಗಿಲ ಬಯಲು

ಅದು ಬೆಳದಿಂಗಳು.

ರವಿಕಾಂತಿಯಿಂದ ಕದ್ದ ಶಶಿಕಾಂತೀಯಾ
ತೇಜಸ್ಸು ಸಕಲ ಜಡ-ಚೇತನಗಳ
ಮೇಲು ತನ್ನ ಬೆಳ್ಳಿ ರೇಖೆ ಮೂಡಿಸಿತ್ತು
ಆದರೆ....
ಅದರೊಳ್ ಅಲ್ಲಾವುದೋ ಪರಿಚಯದ ಮೊಗ

ಅವಳು ಬೆಳದಿಂಗಳ..?

ನಕ್ಕಾಗ ಹೊಮ್ಮುವ ಕಂಗಳ ಕಾಂತಿ,
ಬಳಿ ಸುಳಿದಾಗ ಸೆಳೆಯುವ ತಂಗಾಳಿ
ಸ್ಪರ್ಶ, ಚಕಿತಗೊಂಡರೂ ಅರಿತೆ
ಎನ್ನ...
ತಿಳಿಮನದ ಬೆಳ್ಮುಗಿಲ ಬನಕೆ
ಅವಳೇ ಬೆಳದಿಂಗಳು.

ಮುನಿದಾಗ ಕೋಪದಿ ಮೋಡದ ಮರೆಗೆ
ಸಾಗಿ, ಒಲಿದಾಗ ಚಂದದ ಬಿಂಕದಲಿ
ಬೀಗಿ, ನಲುಮೆಯಲಿ ನಕ್ಕು ಮೃದುವಾಗಿ
ನಾ...
"ಚಿನ್ನಾ" ಎಂದಾಗ ಕೈಗೆ ಸಿಗದೇ ಕಾಡಿದ

ಅವಳು ಬೆಳದಿಂಗಳೆ..?

ಮಳೆಯಲಿ ನೆಂದು ನಾಚಿ ನೀರಾದ ಹಾದಿಯ
ಬಿಂಬದೊಳು ಎನ್ನನೆ ಹಿಂಬಾಲಿಸಿ, ನಾ
ನಿಂತೆಡೆ ತಾನು ನಿಂತು ನಕ್ಕಿತು ಚಂದ್ರಬಿಂಬ
ಅಂತೆಯೇ....
ನನ್ನೊಡನೆ ಜೊತೆಯಾಗಲು ಅಣಿಯಾದ

ಅವಳು ಬೆಳದಿಂಗಳು.

ದಿನಕಳೆದಂತೆ ಎದೆಯಲಿ ಬೆಳ್ಳಿ ಬೆಳಕು
ಕ್ಷೀಣಿಸುತ್ತಾ, ಒಲವ ಹಾಲ್ತೊರೆಯು
ಬತ್ತಿರಲು, ಎನ್ನೊಲವನೇ ಕಡೆಗಾಣಿಸಿ
ಕೊನೆಗೆ...
ಅಮಾವಾಸ್ಯೆಯ ಕಾರ್ಗತ್ತಲಲಿ ಕೈ ಚೆಲ್ಲಿದ

ಅವಳು ಬೆಳದಿಂಗಳೇ..?

ಜಗದ್ಯಾವ ಮೂಲೆಯೊಳು ನಿಂತು ಕಾದರೂ,
ನೋಡಲು ಪರಿತಪಿಸಿದರೂ ಕಾಣದು
ಶಶಿಯ ಹಿಂದಿನ ಮತ್ತೊಂದು ಮೊಗ
ಅಂತೆಯೇ...
ಸನಿಹವಿದ್ದರೂ ಕಾಣದಾದೇ ಆಕೆಯ ಅಂರ್ತಮನ

ಹೌದು... ನಿಜ,
ಅವಳು ಬೆಳದಿಂಗಳೇ......!

ಶರತ್‌ ಚಕ್ರವರ್ತಿ.


ಆಗಸ್ಟ್ 6, 2011

ತಪ್ಪಿನ ಅರಿವು.


        ಈ ಚಿತ್ರ ಯಾವುದೋ ಇಂಗ್ಲಿಷ್ ಚಲನಚಿತ್ರದ 3 ಡಿ ನಿರ್ಮಿತ ಅನ್ಯಗ್ರಹ ಜೀವಿಯಲ್ಲ. ನಾ ಕಂಡ ಪುಟ್ಟ ಮುಗ್ದ ಬಾಲಕ. ಈ ವಿಚಿತ್ರ ಬಾಲಕನನ್ನು ನಾನು ಕಂಡದ್ದು ಹೊಳೆನರಸೀಪುರದ ರೈಲು ನಿಲ್ದಾಣದಲ್ಲಿ. ಈ ಪುಟ್ಟ ಬಾಲಕ ಹುಟ್ಟು ಕುರುಪಿಯಾಗಿರದೇ ಎಲ್ಲಾ ಪುಟ್ಟ ಮಕ್ಕಳಂತೆಯೇ ಇದ್ದು, ಕೆಲದಿನಗಳ ಹಿಂದೆ ನಡೆದ ಆಕಸ್ಮಿಕ ಘಟನೆಯಿಂದ ಘಾಸಿಗೊಂಡು ಮುಖ, ಕೈ ಕಾಲುಗಳು ಸಂಪೂರ್ಣವಾಗಿ ಸುಟ್ಟು ಹೋದವೆಂದು ತಿಳಿಯಿತು.

       ಈ ಹುಡುಗನನ್ನು ಕಂಡು ಅಲ್ಲಿದ್ದ ಜನರ ಪ್ರತಿಕ್ರಿಯೆಗಳು ವಿಚಿತ್ರವಾಗಿದ್ದವು, ಕೆಲವರಂತೂ ಹತ್ತಿರ ಬರದಂತೆಯೇ ಬೈದು, ಹೆದರಿಸಿ ಅಟ್ಟುತ್ತಿದ್ದರು, ಕೆಲ ಹೆಂಗಸರು ನೋಡಿದೊಡನೆಯೆ ಭಯಪಟ್ಟುಕೊಂಡರು, ಒಂದು ಚಿಕ್ಕ ಮಗು ಕೂಡ ಈ ಬಾಲಕನನ್ನು ನೋಡಿ ಕಿರುಚಿಕೊಂಡು ತಂದೆಯ ಬಳಿಗೆ ಓಡಿತು. ಆತ ಕೂಡ ಆ ಹುಡುಗನನ್ನು ಹೆದರಿಸಿ ಆಳುತ್ತಿದ್ದ ತನ್ನ ಮಗುವನ್ನು ಸಂತೈಸಿದನು. 

       ಆದರೆ ಇದ್ಯಾವುದರ ಅರಿವು ಇಲ್ಲದೇ ಹುಡುಗ ಮಾತ್ರ ತನ್ನಷ್ಟಕ್ಕೆ ತಾನು ಆಡುತ್ತಲೇ ಇದ್ದ, ಅವನ ಕಡೆ ಗಮನವಿಲ್ಲದೇ ಅವನ ತಂದೆ ಅದೆಲ್ಲೋ ಕುಡಿದು ನೆಲಕ್ಕೆ ತಲೆಕೊಟ್ಟಿದ್ದ. ಬೈದರೂ, ಅಟ್ಟಿದರು ಅದ್ಯಾವುದು ಅವನ ಆಟಕ್ಕೆ ಅಡ್ಡಿಯಾದಂತೆ ತೋಚಲಿಲ್ಲ.

       ನನ್ನಂತ ಹುಡುಗ ಆಡುತ್ತಾ ಬಂದಾಗ ಹತ್ತಿರದಿಂದ ಆತನನ್ನು ನೋಡಿ ತಲ್ಲಣಿಸಿದೆ. ಆತನ ಬಲಗೈಯಲ್ಲಿ ಬೆರಳುಗಳೇ ಇರಲಿಲ್ಲ. ಆ ಹುಡುಗನ ಮುಖದಲ್ಲಿ ಯಾವುದೇ ನೋವುಗಳಿರಲಿಲ್ಲ. ಆತ ಮುಗ್ದ. ಆದರೇ ಆತನ ಮುಂದಿನ ದಿನಗಳು ಈ ಕ್ರೂರ ಸಮಾಜದ ಅಸಹ್ಯ ವರ್ತನೆಗಳು, ಜನಗಳು ಆತನನ್ನು ಕಾಣುವ ಕೀಳು ಭಾವಗಳು ಆತನ ಭವಿಷ್ಯವ ಕಾಡದೇ ಇರುವುದಿಲ್ಲ. ನೆನೆದು ಆ ಹುಡುಗನ ಮೇಲೆ ಮರುಕ ಉಂಟಾಯಿತು, ಅಂಗಡಿಯ ಬಳಿಗೆ ಹೋಗಿ ಆತನಿಗೆ ಬಿಸ್ಕೇಟ್ ಕೊಡಿಸಿ ಸಾರ್ಥಕವಾಯಿತು ಎಂದುಕೊಂಡೆ.  ಆದರೇ ಆ ಹುಡುಗ ನಲಿಯುತ್ತ ಓಡಿ ಹೋಗಿ ಬಿಸ್ಕೇಟ್ ಪ್ಯಾಕ್ ಅನ್ನು ತನ್ನ ತಂದೆ ಕೈಲಿರಿಸಿ ವಾಪಸಾದ. 

      ನನ್ನಿಂದ ತುಸು ದೂರದಲ್ಲಿ ಇನ್ನೋರ್ವ ಯುವಕ ಆ ಹುಡುಗನನ್ನು ಛೇಷ್ಟೆ ಮಾಡುತ್ತಾ ಆಟವಾಡಿಸುತ್ತಿದ್ದಿದನ್ನು ಕಂಡೆ ಆ ಬಾಲಕನು ಸಹ ಅವನೊಡನೆ ಆಡುತ್ತಾ ಜೋರಾಗಿ ನಗುತ್ತಿರುವುದು ಕೇಳಿಸಿತು. ತಕ್ಷಣ ನನಗೆ ನನ್ನ ತಪ್ಪಿನ ಅರಿವಾಯಿತು. ಇಂತ ವಿಕಲಾಂಗ ಮಕ್ಕಳಿಗೆ ಬೇಕಿರುವುದು ನಮ್ಮ ಭಿಕ್ಷೆ ಸಮಾನವಾದ ನಮ್ಮ ಕರುಣೆಯಲ್ಲ. ಎಲ್ಲರಂತೆ ಸಮಾನವಾಗಿ ಕಾಣುವ ಆದರ್ಶ ಗುಣ. 


-ಶರತ್‌ ಚಕ್ರವರ್ತಿ.