ಬುಧವಾರ, ಸೆಪ್ಟೆಂಬರ್ 28, 2011

ಭಾವಬಂಧನ.


ಓ... ಒಲವ ಮಾರಿಯೇ....!
ಇನ್ನೆಷ್ಟು ನಿನ್ನ ಸಾಮ್ರಾಜ್ಯಶಾಹಿ ವಾಂಛೆ..

ಮುಗಿದಿಲ್ಲವೇ ಹಸಿ ಮುಗ್ಧ ಹೃದಯಗಳ
ಮೇಲೆ ನಿನ್ನ ನಿಷ್ಕಾರುಣ್ಯ ಆಕ್ರಮಣ..

ಸಾಲದಾಯಿತೆ ಎಳೆ ಮನದ ತಿಳಿ ಪನ್ನಿರ
ಕೊಳವ ರಕ್ತಸಿಕ್ತ ಕೆನ್ನೀರಾಗಿಸಿದ್ದು..

ನಿನ್ನ ಸೆರೆಯೊಳು ವಿಷ-ಪಾನಮತ್ತರಾಗಿ ಬಾಳ
ಹಾದಿಯ ಕಳೆದರೂ ತೀರಲಿಲ್ಲವೇ ನಿನ್ನ ಅರಿಕೆ..

ಮನದ ಅಪಸ್ವರಗಳಿಗೆಲ್ಲ ಕಾರಣೀಭೂತವಾದ
ನಿನ್ನ ಸದ್ದಿಲ್ಲದ ನಡಿಗೆ ಏಕಿಂದು ನನ್ನೊಳು..

ಸಾಕು ನಿಲ್ಲಿಸು ನಿನ್ನೀ ವಶೀಕರಣ, ಓ ಒಲ್ಲದ
ಒಲವೇ ಆಗಿರುವೆ ನಿನ್ನೊಳು ಭಾವಬಂಧನ.


ಶರತ್‌ ಚಕ್ರವರ್ತಿ.

ಸೋಮವಾರ, ಸೆಪ್ಟೆಂಬರ್ 26, 2011

ಭ್ರಮಾನಿರತ....!


ಎರಡೇ ಎರಡು ಪುಟ್ಟ ಕಂಗಳನ್ನು ಕೊಟ್ಟನು,
ಬೆಟ್ಟ ಕಣಿವೆ, ಹೊಸ ಚಿಗುರುಗಳಲ್ಲಿ
ಗಿಡ-ಬಳ್ಳಿ, ಸಣ್ಣ ತೊರೆಗಳಲ್ಲಿ
ಚುಂಬಕ ತೆರದಿ ನಿನ್ನಂದ ತುಂಬಿಟ್ಟನು..

ಅರಿಯೇ, ಅದು ಹೇಗೆ ತುಂಬಿಸಿಕೊಳ್ಳಲಿ ನಿನ್ನ
ಸೊಬಗು, ಭಿಂಕ-ಭಿನ್ನಾಣಗಳಿಂದ
ಸೆಳೆವ, ನಯಾ-ನಾಜುಕುಗಳಿಂದ
ತಳತಳಿಸುವ ಅಂದಗಾತಿಯೇ ನಿನ್ನ.

ಸಾಲದು, ಸಾಲ ನೀಡು ನಿನ್ನ ಕಡು ನೀಲ
ಕಂಗಳ, ಹರಿದು ಸಾಗುವ ಮೋಡವ
ತಡೆದು, ಮುದ್ದಿಸಿ ಸೆಳೆದು ಮುತ್ತಿಡುವ
ನಿನ್ನ ಮನದ ಒಳಬಣ್ಣ ನೋಡೊ ಹಂಬಲ


ಚೌಕಟ್ಟಿನೊಳು ಕಟ್ಟಿ ಹಾಕುವ ಸಲುವಾಗಿ ಕ್ಲಿಕ್ಕಿಸಿದೆ
ಪೋಟೋ ಸಾವಿರ ಸಾವಿರ, ಮುತ್ತಿದ ಮಂಜಿನ
ಮುತ್ತಲ್ಲಿ ಮಿಂದ ನಿನ್ನ ತಾಜ ನಗೆಯ ವಿನಃ
ಸೋತು ರಸಹೀನವಾದ ನಿನ್ನದೇ ಪೋಟೋ ಮೊಬ್ಬಾಗಿದೆ..


ಚಿತ್ರಿಸಲೇ ಕುಂಚವನವಲಂಭಿಸಿ...?
ಪದ್ಯವ ಕಟ್ಟಲೆ ಪದಗಳ ತುಂಬಿಸಿ...?

ಕಣ್ಣಂಚಲಿ ಕದ್ದ ಬಣ್ಣವ ಭಿತ್ತಿಯಲಿ ಹೇಗೆ ಇಳಿಸಲಿ
ಮನದಾಳದಲ್ಲಿ ಉದ್ಗಾರದ ದನಿಯೊಂದೇ
ತುಂಬಿರಲು ಪದಗಳನ್ಹೇಗೆ ಮೂಡಿಸಲಿ..


ನಿಶ್ಯಕ್ತನಾಗಿ ಕುಂಚ ಬಣ್ಣಗಳ ಬದಿಗಿಟ್ಟು,
ಬಾವಾ ಪದಗಳ ಖಾಲಿಮೂಟೆಯ ಕೈಬಿಟ್ಟು
ನೋಡುತ ನಿಂತೆನು ನಾನಾಗಿ ಭ್ರಮಾನಿರತ....!









ಶರತ್‌ ಚಕ್ರವರ್ತಿ.
ದಿನಾಂಕ: 24.09.2011
ಬಿಸಲೆ ಸೌಂದರ್ಯ ತಾಣವ ಕುರಿತು ಬರೆದ ಸಾಲುಗಳು.



ಬುಧವಾರ, ಸೆಪ್ಟೆಂಬರ್ 7, 2011

ಸೋನೆಯೊಡನೆ ಸರಸ....!


ಸಂಜೆಯ ಮೊಬ್ಬುಗತ್ತಲೆ..
ಚಿಟಿ ಚಿಟಿ ಚಿಟುಗುಡುತ್ತಿತ್ತು ಸೋನೆ ಮಳೆ.

ಜನಸ್ತೋಮವಿಲ್ಲದೇ ವಿಶ್ರಾಂತಿಯಲ್ಲಿ ಮಿಂದು ಮಲಗಿತ್ತು ಡಾಂಬರು ರಸ್ತೆ,
ಎದ್ದು ಕಾಣುತ್ತಿತ್ತು ಜಗತ್ತಿನ ವ್ಯಾಪಾರದಲ್ಲಾಗಿದ್ದ ಅಸ್ಥ-ವ್ಯಸ್ಥೆ.

ಮಳೆಯಭಯಕೆ ತಲೆಮರೆಸಿ ನುಸಿಯುತ್ತಿತ್ತು ಮೊಬ್ಬುನೆರಳು,
ಬೆಚ್ಚನೆ ಹತ್ತಿ ರುಮಾಲು ಸುತ್ತಿದ್ದವು ಚಳಿಪೀಡಿತರ ಕೊರಳು.

ಕೆಸರಿಂದ ತುಂಬಿ ಅಂಗಾತ ಬಿದ್ದಿತ್ತು ಕಾಲ್ನಡಿಗೆಯ ಫ್ಲಾಟು
ನೆನೆದೊಡನೆ ದಿಗಿಲಾಯ್ತು ನಾ ಧರಿಸಿದ್ದು ಹಚ್ಚ ಬಿಳಿಯ ಪ್ಯಾಂಟು

ಕೊಳಕಾದರೆ..? ಮುಗುಳ್ ನಕ್ಕೆ, ಕಲೆ ಒಳ್ಳೇದೇ...
ಆದರೇ... ಚಿಂತೆಯಾಯಿತು, ನನ್ನ ಕೊಳೆ ನಾನೇ ತೊಳಿಯೋದೇ

ಮುದುಡಿ ಪ್ಯಾಂಟು ಮುಕ್ಕಾಲು ಮಾಡುತ್ತಾ
ಮೆಲ್ಲನೆ ಅಡಿಯಿಟ್ಟೆ ಚಳಿಯಿಂದ ನಡುಗುತ್ತಾ

ಕೆಸರಿಗೆ ಅಂಜೀ ಹೆಜ್ಜೆಯಾಯ್ತು ಅಡಿ ಅಡಿ
ಮಳೆಯ ಮೇಲೆ ಮನಸ್ಸಾಯ್ತು ಕಿಡಿ ಕಿಡಿ

ಹೇಗೋ ತೆವಳುತ್ತಾ ಜೀಕುತ್ತ ಜಿಗಿಯುತ್ತಾ ಸಿಕ್ಕಿತ್ತು ರಸ್ತೆಯ ಮೂಲೆ
ಕಂಡಳು ಮಳೆಯಲ್ಲಿ ತೊಯ್ದು ಮುದ್ದೆ ಮುದ್ದೆಯಾಗಿದ್ದ ಬಾಲೆ

ಕಣ್ ಗಳ ಸೆಳೆದಿತ್ತು ಹಸಿ ಹಸಿಯಾದ ಅಂದ
ತೊದಲಿತು ಮನವೂ, ಆಹಾ... ಇವಳು ಅದೇಷ್ಟು ಚಂದ..!

ಉಲ್ಲಾಸಿತನಾದೇ, ಮೈಮರೆತೇ, ಮುಂದಡಿಯಿಟ್ಟೆ...

ಕಾಲು ಜಾರಿತು.....

ಮರುಕ್ಷಣ ನಾನಾಗಿದ್ದೆ ಮಣ್ಣಿನ ಗೊಂಬೆ
ಕಂಗೇಡಿಸಿ ಕಣ್ಮರೆಯಾಗಿದ್ದಳು ಆ ಮಾಯಾ ರಂಬೆ.

ಶರತ್‌ ಚಕ್ರವರ್ತಿ.


ಜುಲೈ 19, 2011

ಬೆಳದಿಂಗಳು...


ಶುದ್ದ ಆಷಾಡದ ಪೌರ್ಣಮಿಯ ರಾತ್ರಿಯೊಳು
ಕನಸಿನಿಂದೆಚ್ಚೆತ್ತು ನಿದ್ರಾಹೀನನಾಗಿ
ಚಳಿಯಲ್ಲಿ ಮೈದಡವುತ್ತಾ ಹೊರನಡೆದಾಗ
ಕಂಡೆ....
ಹಾಲುಕೊಡ ಚೆಲ್ಲಿದಂತಿದ್ದ ಮುಗಿಲ ಬಯಲು

ಅದು ಬೆಳದಿಂಗಳು.

ರವಿಕಾಂತಿಯಿಂದ ಕದ್ದ ಶಶಿಕಾಂತೀಯಾ
ತೇಜಸ್ಸು ಸಕಲ ಜಡ-ಚೇತನಗಳ
ಮೇಲು ತನ್ನ ಬೆಳ್ಳಿ ರೇಖೆ ಮೂಡಿಸಿತ್ತು
ಆದರೆ....
ಅದರೊಳ್ ಅಲ್ಲಾವುದೋ ಪರಿಚಯದ ಮೊಗ

ಅವಳು ಬೆಳದಿಂಗಳ..?

ನಕ್ಕಾಗ ಹೊಮ್ಮುವ ಕಂಗಳ ಕಾಂತಿ,
ಬಳಿ ಸುಳಿದಾಗ ಸೆಳೆಯುವ ತಂಗಾಳಿ
ಸ್ಪರ್ಶ, ಚಕಿತಗೊಂಡರೂ ಅರಿತೆ
ಎನ್ನ...
ತಿಳಿಮನದ ಬೆಳ್ಮುಗಿಲ ಬನಕೆ
ಅವಳೇ ಬೆಳದಿಂಗಳು.

ಮುನಿದಾಗ ಕೋಪದಿ ಮೋಡದ ಮರೆಗೆ
ಸಾಗಿ, ಒಲಿದಾಗ ಚಂದದ ಬಿಂಕದಲಿ
ಬೀಗಿ, ನಲುಮೆಯಲಿ ನಕ್ಕು ಮೃದುವಾಗಿ
ನಾ...
"ಚಿನ್ನಾ" ಎಂದಾಗ ಕೈಗೆ ಸಿಗದೇ ಕಾಡಿದ

ಅವಳು ಬೆಳದಿಂಗಳೆ..?

ಮಳೆಯಲಿ ನೆಂದು ನಾಚಿ ನೀರಾದ ಹಾದಿಯ
ಬಿಂಬದೊಳು ಎನ್ನನೆ ಹಿಂಬಾಲಿಸಿ, ನಾ
ನಿಂತೆಡೆ ತಾನು ನಿಂತು ನಕ್ಕಿತು ಚಂದ್ರಬಿಂಬ
ಅಂತೆಯೇ....
ನನ್ನೊಡನೆ ಜೊತೆಯಾಗಲು ಅಣಿಯಾದ

ಅವಳು ಬೆಳದಿಂಗಳು.

ದಿನಕಳೆದಂತೆ ಎದೆಯಲಿ ಬೆಳ್ಳಿ ಬೆಳಕು
ಕ್ಷೀಣಿಸುತ್ತಾ, ಒಲವ ಹಾಲ್ತೊರೆಯು
ಬತ್ತಿರಲು, ಎನ್ನೊಲವನೇ ಕಡೆಗಾಣಿಸಿ
ಕೊನೆಗೆ...
ಅಮಾವಾಸ್ಯೆಯ ಕಾರ್ಗತ್ತಲಲಿ ಕೈ ಚೆಲ್ಲಿದ

ಅವಳು ಬೆಳದಿಂಗಳೇ..?

ಜಗದ್ಯಾವ ಮೂಲೆಯೊಳು ನಿಂತು ಕಾದರೂ,
ನೋಡಲು ಪರಿತಪಿಸಿದರೂ ಕಾಣದು
ಶಶಿಯ ಹಿಂದಿನ ಮತ್ತೊಂದು ಮೊಗ
ಅಂತೆಯೇ...
ಸನಿಹವಿದ್ದರೂ ಕಾಣದಾದೇ ಆಕೆಯ ಅಂರ್ತಮನ

ಹೌದು... ನಿಜ,
ಅವಳು ಬೆಳದಿಂಗಳೇ......!

ಶರತ್‌ ಚಕ್ರವರ್ತಿ.


ಆಗಸ್ಟ್ 6, 2011

ತಪ್ಪಿನ ಅರಿವು.


        ಈ ಚಿತ್ರ ಯಾವುದೋ ಇಂಗ್ಲಿಷ್ ಚಲನಚಿತ್ರದ 3 ಡಿ ನಿರ್ಮಿತ ಅನ್ಯಗ್ರಹ ಜೀವಿಯಲ್ಲ. ನಾ ಕಂಡ ಪುಟ್ಟ ಮುಗ್ದ ಬಾಲಕ. ಈ ವಿಚಿತ್ರ ಬಾಲಕನನ್ನು ನಾನು ಕಂಡದ್ದು ಹೊಳೆನರಸೀಪುರದ ರೈಲು ನಿಲ್ದಾಣದಲ್ಲಿ. ಈ ಪುಟ್ಟ ಬಾಲಕ ಹುಟ್ಟು ಕುರುಪಿಯಾಗಿರದೇ ಎಲ್ಲಾ ಪುಟ್ಟ ಮಕ್ಕಳಂತೆಯೇ ಇದ್ದು, ಕೆಲದಿನಗಳ ಹಿಂದೆ ನಡೆದ ಆಕಸ್ಮಿಕ ಘಟನೆಯಿಂದ ಘಾಸಿಗೊಂಡು ಮುಖ, ಕೈ ಕಾಲುಗಳು ಸಂಪೂರ್ಣವಾಗಿ ಸುಟ್ಟು ಹೋದವೆಂದು ತಿಳಿಯಿತು.

       ಈ ಹುಡುಗನನ್ನು ಕಂಡು ಅಲ್ಲಿದ್ದ ಜನರ ಪ್ರತಿಕ್ರಿಯೆಗಳು ವಿಚಿತ್ರವಾಗಿದ್ದವು, ಕೆಲವರಂತೂ ಹತ್ತಿರ ಬರದಂತೆಯೇ ಬೈದು, ಹೆದರಿಸಿ ಅಟ್ಟುತ್ತಿದ್ದರು, ಕೆಲ ಹೆಂಗಸರು ನೋಡಿದೊಡನೆಯೆ ಭಯಪಟ್ಟುಕೊಂಡರು, ಒಂದು ಚಿಕ್ಕ ಮಗು ಕೂಡ ಈ ಬಾಲಕನನ್ನು ನೋಡಿ ಕಿರುಚಿಕೊಂಡು ತಂದೆಯ ಬಳಿಗೆ ಓಡಿತು. ಆತ ಕೂಡ ಆ ಹುಡುಗನನ್ನು ಹೆದರಿಸಿ ಆಳುತ್ತಿದ್ದ ತನ್ನ ಮಗುವನ್ನು ಸಂತೈಸಿದನು. 

       ಆದರೆ ಇದ್ಯಾವುದರ ಅರಿವು ಇಲ್ಲದೇ ಹುಡುಗ ಮಾತ್ರ ತನ್ನಷ್ಟಕ್ಕೆ ತಾನು ಆಡುತ್ತಲೇ ಇದ್ದ, ಅವನ ಕಡೆ ಗಮನವಿಲ್ಲದೇ ಅವನ ತಂದೆ ಅದೆಲ್ಲೋ ಕುಡಿದು ನೆಲಕ್ಕೆ ತಲೆಕೊಟ್ಟಿದ್ದ. ಬೈದರೂ, ಅಟ್ಟಿದರು ಅದ್ಯಾವುದು ಅವನ ಆಟಕ್ಕೆ ಅಡ್ಡಿಯಾದಂತೆ ತೋಚಲಿಲ್ಲ.

       ನನ್ನಂತ ಹುಡುಗ ಆಡುತ್ತಾ ಬಂದಾಗ ಹತ್ತಿರದಿಂದ ಆತನನ್ನು ನೋಡಿ ತಲ್ಲಣಿಸಿದೆ. ಆತನ ಬಲಗೈಯಲ್ಲಿ ಬೆರಳುಗಳೇ ಇರಲಿಲ್ಲ. ಆ ಹುಡುಗನ ಮುಖದಲ್ಲಿ ಯಾವುದೇ ನೋವುಗಳಿರಲಿಲ್ಲ. ಆತ ಮುಗ್ದ. ಆದರೇ ಆತನ ಮುಂದಿನ ದಿನಗಳು ಈ ಕ್ರೂರ ಸಮಾಜದ ಅಸಹ್ಯ ವರ್ತನೆಗಳು, ಜನಗಳು ಆತನನ್ನು ಕಾಣುವ ಕೀಳು ಭಾವಗಳು ಆತನ ಭವಿಷ್ಯವ ಕಾಡದೇ ಇರುವುದಿಲ್ಲ. ನೆನೆದು ಆ ಹುಡುಗನ ಮೇಲೆ ಮರುಕ ಉಂಟಾಯಿತು, ಅಂಗಡಿಯ ಬಳಿಗೆ ಹೋಗಿ ಆತನಿಗೆ ಬಿಸ್ಕೇಟ್ ಕೊಡಿಸಿ ಸಾರ್ಥಕವಾಯಿತು ಎಂದುಕೊಂಡೆ.  ಆದರೇ ಆ ಹುಡುಗ ನಲಿಯುತ್ತ ಓಡಿ ಹೋಗಿ ಬಿಸ್ಕೇಟ್ ಪ್ಯಾಕ್ ಅನ್ನು ತನ್ನ ತಂದೆ ಕೈಲಿರಿಸಿ ವಾಪಸಾದ. 

      ನನ್ನಿಂದ ತುಸು ದೂರದಲ್ಲಿ ಇನ್ನೋರ್ವ ಯುವಕ ಆ ಹುಡುಗನನ್ನು ಛೇಷ್ಟೆ ಮಾಡುತ್ತಾ ಆಟವಾಡಿಸುತ್ತಿದ್ದಿದನ್ನು ಕಂಡೆ ಆ ಬಾಲಕನು ಸಹ ಅವನೊಡನೆ ಆಡುತ್ತಾ ಜೋರಾಗಿ ನಗುತ್ತಿರುವುದು ಕೇಳಿಸಿತು. ತಕ್ಷಣ ನನಗೆ ನನ್ನ ತಪ್ಪಿನ ಅರಿವಾಯಿತು. ಇಂತ ವಿಕಲಾಂಗ ಮಕ್ಕಳಿಗೆ ಬೇಕಿರುವುದು ನಮ್ಮ ಭಿಕ್ಷೆ ಸಮಾನವಾದ ನಮ್ಮ ಕರುಣೆಯಲ್ಲ. ಎಲ್ಲರಂತೆ ಸಮಾನವಾಗಿ ಕಾಣುವ ಆದರ್ಶ ಗುಣ. 


-ಶರತ್‌ ಚಕ್ರವರ್ತಿ.