ಶುಕ್ರವಾರ, ಅಕ್ಟೋಬರ್ 21, 2011

ಈ ನಿನ್ನ ಹಠವೇಕೆ..?

ಶ್ವಾಸವ ಮರೆತು ಮಡ್ಡಿಯಾದ ಜಡ ಬಂಡೆಯಿದು 
ಕುಟ್ಟಿ ಕೆಡುವಿ ಕೆತ್ತಿ ರೂಪಿಸುವ ಹಠವೇಕೆ.
ಹೇ ಸರಳ ಸುಂದರ ತಂಗಾಳಿ
ಸಾಧ್ಯವೇ ನಿನಗಿದು? 
ಸುಮ್ಮನೆ ಇದ್ದುಬಿಡು ; ಆಗುವ ಬದಲು ಹೈರಾಣ.

ಇಂದ್ರಿಯಗಳ ಕೊಂದು 
ಕುರುಡ ಜಡ ಮೌನಿಯಾಗಿ 
ಏಕಾಂತ ಧ್ಯಾನಗಳಲ್ಲೇ ಮರೆಯಾಗಲಿರುವೆ.
ಎನಗೇಕೆ ಕಿವಿ-ಮೂಗು-ಕಣ್ ಮನಗಳ 
ಮೂಡಿಸಿ ; ಕೂಡಿಸಿ
ಭಾವರೂಪ ನೀಡ ಹೊರಟಿರುವೆ.


ನೀಡುವುದಾದರೆ ನೀಡು 
ನೋವಿಲ್ಲದ ಮನವ 
ನೆನಹುಗಳಿಲ್ಲದ ಕಂಗಳ
ಮಾಧುರ್ಯದ ಅರಿವಿಲ್ಲದ ಕರ್ಣಗಳ.
ಮಡಿದ ಹೃದಯಾಂತಕರಣಗಳಿಗೆ 
ಪುನರ್ ಜನ್ಮವೀಯಲೇ ಬೇಕಿದ್ದರೆ ಬಾ
ಸೇರು ಈ ತನುಮನಕೆ ಶುದ್ದ ಶ್ವಾಸವಾಗಿ.

-ಶರತ್‌ ಚಕ್ರವರ್ತಿ.




ಸೋಮವಾರ, ಅಕ್ಟೋಬರ್ 10, 2011

ವಿರಹ ನಾದ


ಸುರಿವ ಮಳೆ, ಭರದ ಗಾಳಿ
ಮುರಿದ ಕೊಳಲು, ಹರಿದ ತಂತಿ
ಒಡೆದ ಸ್ವರ, ಮರೆತ ಸಾಲು
ಕೊರೆವ ನೆನಪು, ಕೊರಗೊ ಮನಸ್ಸು
ಹದವಾಗಿ ಬೆರೆತು, ಕಲೆತು
ಹರಿದಿದೆ ವಿರಹ ನಾದ
ಅರಿವಿಲ್ಲದೆ ಪಲ್ಲವಿ ಚರಣ ಪಾದ.

ಶರತ್‌ ಚಕ್ರವರ್ತಿ

ಮೊಳಕೆ


ಹಾಸನದಲ್ಲಿ ತುಂಬಾ ಮಳೆ..
ಮೊಳಕೆಗಳು ಮೆಲ್ಲನೆ ಮೂಡುತಿವೆ
ಮನಸ್ಸು ಪುಡಿಯಾಗಿ, ಮಣ್ಣಾಗಿ
ಕರಗಿ ಕೊಳೆತು ಗೊಬ್ಬರವಾಗಿ
ಮತ್ತೇ ಇದೀಗ ಸಡಿಲವಾಗಿ
ಹೊರಬರುತ್ತಿವೆ ಹೂತಿಟ್ಟ ನೆನಪುಗಳು
ಮೊಳಕೆಗಳಾಗಿ.


ಶರತ್‌ ಚಕ್ರವರ್ತಿ


ನನ್ನೊಡಲ ಪದಗಳು.


ಪರಿತಪಿತ ವಯಸ್ಸಿನ ಪರಿಭಾವವೊ
ಮಿಡಿತಗಳ ಕಾಣದ ಕರವೊ
ತುಡಿತಗಳ ಸೆಳಕಿನ ವರವೊ
ಹುಚ್ಚು ಭಾವನೆಗಳ ಆರ್ಭಟವೊ
ಸಿಹಿ-ಕಹಿ ನೆನಪುಗಳ ತಿಕ್ಕಾಟವೊ
ಕನ್ನಡ ಪದಗಳ ಮೇಲಿನ ಒಲವೊ
ಹಪಹಪಿಸುವ ಮನದ ದುಗುಡವೊ
ಕಾಣೆ.. ನಾ ಕಾಣೆ,
ಹರಿವವು ಒಡಲ ಕಿತ್ತು ರಭಸದಿ
ಮನವ ಜಾರಿಸೊ ಝರಿಯಂತೆ
ನನ್ನೊಡಲ ಪದಗಳು.


ಶರತ್‌ ಚಕ್ರವರ್ತಿ
ದಿನಾಂಕ: 09.10.2011

ಸಮಯ


ಸಮಯವ ಕೊಲ್ಲುವುದೇ
ಅದು ಹೇಗೆ...?


ನಿತ್ಯ ಕಾಯಕದೊಳು
ನಿಜಕಾಯವನ್ನೇ ಮರೆತವರ ನಡುವೆ.


ಕಣ ಕಣ ಕ್ಷಣಗಳ ಕುದಿಸಿ
ಧ್ಯಾನಿಸಿ ಮಂತ್ರಿಸುವವರ ನಡುವೆ.


ಕಾಲದೊಡನೆ ಹಠಕ್ಕೆ ಬಿದ್ದು
ಕಾಲವೇ ಕಾಸೆಂಬಂತೆ ಕಾಣುವವರ ನಡುವೆ.


ಅದು ಹೇಗೆ ಸಾಧ್ಯ
ಸಮಯವ ಕೊಲ್ಲಲು...?


ನಾವ್ ಕೊಲ್ಲುವ ನಮ್ಮ ಬೇಸರಗಳ, ಕಾಡುವ
ನೆನಪುಗಳ, ರಚ್ಚೆಗೆ ಹಿಡಿಸುವ ಮನದುದ್ವೇಗಗಳ..


ಕಾಯುವ ಮನಶ್ಯಾಂತಿಯ
ಕಳೆಯದೇ ಈ ಸುಸಮಯವ.


ಶರತ್‌ ಚಕ್ರವರ್ತಿ
ದಿನಾಂಕ:09.10.2011

ಶನಿವಾರ, ಅಕ್ಟೋಬರ್ 1, 2011

ಹನಿ..


ನಿನ್ನ ಕಳೆದು ಬದುಕಲೆತ್ನಿಸಿ
ದಾರಿ ಮರೆತು ನಿಂತಿರುವೆ
ತಿರುಗಿ ನೋಡಿದರೆ ನೆರಳಿಲ್ಲ
ಅರಿತೆನಾಗ...
ಓ ಬೆಳಕೆ ನನ್ನೊಡೆನೆ ನೀನಿಲ್ಲ.


ಶರತ್‌ ಚಕ್ರವರ್ತಿ.
30.09.11

ಹನಿ..


ಓ...., ಭಾವವೇ ನೀ ಏನು ಮಳೆಬಿಲ್ಲೆ..?
ಎಲ್ಲಾ ಕನಸಿನ ಬಣ್ಣಗಳ ಮಿಶ್ರಣ
ಮನದ ಮುಗಿಲ ಮಂಟಪದ ತೋರಣ
ಕಣ್-ಮನ ಸೆಳೆತಕೆ ಕಾರಣ
ಹೊಸ ಚಿತ್ರಪಟಕೆ ಪ್ರೇರಣ
ಆದರೆ....,


ಕಳೆದೊದ ಒಲವಿನಂತೆ ಕರಗಿದೆ ಕ್ಷಣದಲಿ, ನೀಡು ಬಾ ವಿವರಣ


ಆಗಲೇಬೇಕು ವಿಚಾರಣಾ....!

ಶರತ್‌ ಚಕ್ರವರ್ತಿ.
29.09.2011